ಸಾರಾಂಶ
ಹುಬ್ಬಳ್ಳಿ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಇಲ್ಲಿನ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ 494 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅಂಜಲಿ ತನ್ನಿಂದ ದೂರವಾದ ಹಿನ್ನೆಲೆಯಲ್ಲಿ ಹತಾಶೆ, ಕೋಪಗೊಂಡ ಆಕೆಯ ಪ್ರಿಯಕರ ಗಿರೀಶ ಸಾವಂತನೇ ಹತ್ಯೆ ಮಾಡಿದ್ದಾನೆ ಎನ್ನುವ ಸತ್ಯವನ್ನು ಸಾಕ್ಷಿಗಳ ಸಮೇತ ಬಿಚ್ಚಿಟ್ಟಿದ್ದಾರೆ.
ಆರೋಪಿ ಗಿರೀಶ ಮೈಸೂರಿನಿಂದಲೇ ಚಾಕು ತಂದಿದ್ದು ಸೇರಿದಂತೆ ವಿವಿಧ ವಿಷಯಗಳ ಕುರಿತು ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿನ ವೀರಾಪುರ ಓಣಿಯ ನಿವಾಸಿ ಅಂಜಲಿ ಅಂಬಿಗೇರ (21) ಯುವತಿಯನ್ನು ಮೇ 15ರಂದು ಗಿರೀಶ್ ಅಲಿಯಾಸ್ ವಿಶ್ವನಾಥ ಸಾವಂತ ಎಂಬಾತ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಮನೆಗೆ ನುಗ್ಗಿ ಕೊಲೆ ಮಾಡಿದ್ದ ಕಾರಣ ಭಾರೀ ಸಂಚಲನವನ್ನುಂಟು ಮಾಡಿತ್ತು. ಸಾಕಷ್ಟು ಪ್ರತಿಭಟನೆಗಳೆಲ್ಲ ನಡೆದಿದ್ದವು. ಪ್ರತಿಭಟನೆಗೆ ಮಣಿದು ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಸಿಐಡಿ ಬರೋಬ್ಬರಿ 98 ದಿನಗಳ ಬಳಿಕ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ.
ಸಿಐಡಿ ಡಿವೈಎಸ್‌ಪಿ ಎಂ.ಎಚ್. ಉಮೇಶ ನೇತೃತ್ವದ ತಂಡ ಸಂಪೂರ್ಣ ತನಿಖೆ ಮುಗಿಸಿ ಹಂತಕ ಗಿರೀಶ ಸಾವಂತನ ವಿರುದ್ಧ ಸ್ಥಳೀಯ ಮೂರನೇ ಅಧಿಕ ದಿವಾಣಿ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ಕೋರ್ಟ್‌ಗೆ ಅಂದಾಜು 494 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಚಾರ್ಜ್‌ಶೀಟ್‌ಲ್ಲಿ ಏನಿದೆ?
ಅಂಜಲಿ ಅಂಬಿಗೇರ ಹಾಗೂ ಗಿರೀಶ ಮಧ್ಯೆ ಸ್ನೇಹ ಇತ್ತು. ಗಿರೀಶ ಮೈಸೂರಿನ ಮಹಾರಾಜ ಹೋಟೆಲ್ ಆವರಣದಲ್ಲಿ ಎಂಎಸ್‌ಸಿ ಪಬ್ ಆ್ಯಂಡ್ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಅಂಜಲಿ 3 ಬಾರಿ ಅಲ್ಲಿಗೆ ಹೋಗಿ ಅವನನ್ನು ಭೇಟಿಯಾಗಿದ್ದಳು. ನಂತರ ಇಬ್ಬರ ನಡುವೆ ಕೆಲವೊಂದಿಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ಮನಃಸ್ತಾಪವಾಗಿತ್ತು. ಬಳಿಕ ಗಿರೀಶನಿಗೆ ಆಕೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಅವಳಿಗೆ ಗಿರೀಶ ಹಲವಾರು ಬಾರಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಫೋನ್ ಬ್ಲಾಕ್ ಮಾಡಿದ್ದಳು. ಇದರಿಂದ ಮನನೊಂದು ಮೇ 15ರಂದು ಅವಳ ಮನೆಗೆ ಬಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ದೋಷಾರೂಪಣೆಯ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
85 ಸಾಕ್ಷ್ಯ:
ಹಂತಕನ ತಾಯಿ, ಹತ್ಯೆಯಾದ ಯುವತಿಯ ಅಜ್ಜಿ, ಸಹೋದರಿಯರು, ಘಟನಾ ಸ್ಥಳದ ಮನೆಯ ಸುತ್ತಲಿನ ಕೆಲ ಜನರು, ಆತನೊಂದಿಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ಕೊಲೆಯಾದ ದಿನ ಹಂತಕ ಬಂದಿದ್ದ ಆಟೋ ರಿಕ್ಷಾ ಚಾಲಕ ಸೇರಿದಂತೆ 85 ಜನರ ಸಾಕ್ಷ್ಯಗಳನ್ನು ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳು, ಶವದ ಮರಣೋತ್ತರ ಪರೀಕ್ಷೆಯ ವರದಿ, ಎಫ್‌ಎಸ್‌ಎಲ್ ವರದಿ, ದಾಖಲೆಗಳು, ಮೊಬೈಲ್ ಫೋನ್, ಹತ್ಯೆಗೆ ಬಳಸಿದ ಚಾಕು ಇತರೆ ಇದರಲ್ಲಿ ಅಡಕವಾಗಿವೆ.
ಮೈಸೂರಿನಿಂದಲೇ ಚಾಕು ತಂದಿದ್ದ
ಗಿರೀಶ ಅಂಜಲಿಯನ್ನು ಹತ್ಯೆ ಮಾಡಲು ಮೈಸೂರಿನಲ್ಲಿ ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ನಿಂದಲೇ ಚಾಕು ತೆಗೆದುಕೊಂಡು ಬಂದಿದ್ದ. ಜೊತೆಗೆ ತನ್ನ ಸುಳಿವು ಸಿಗಬಾರದೆಂದು ಬಸ್ ನಿಲ್ದಾಣ ಬಳಿಯ ಫುಟ್‌ಪಾತ್‌ನ ಅಂಗಡಿಯಲ್ಲಿ ಮಾಸ್ಕ್ ಖರೀದಿಸಿ ಧರಿಸಿದ್ದ.
ರೈಲ್ವೆ ಪೊಲೀಸರಿಂದ ಬಂಧನ
ಕೊಲೆ ಮಾಡಿದ ಮೇಲೆ ಹಂತಕ ಗಿರೀಶ ಸಾವಂತ ಮತ್ತೆ ಮೈಸೂರಿಗೆ ಹೋಗಿದ್ದ. ಅಲ್ಲಿಂದ ವಾಪಸ್ ಬರುವಾಗ ಮೇ 17ರಂದು ದಾವಣಗೆರೆ ಬಳಿ ರೈಲಿನಲ್ಲಿ ಮಹಿಳೆಯೊಬ್ಬಳೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ರೈಲಿನಿಂದ ಬಿದ್ದು ಗಾಯಗೊಂಡಿದ್ದ. ದಾವಣಗೆರೆಯಲ್ಲಿ ರೈಲ್ವೆ ಪೊಲೀಸರು ಬಂಧಿಸಿ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.
ಸಿಐಡಿಗೆ ಏಕೆ ವರ್ಗಾವಣೆ?
ಹಂತಕ ಗಿರೀಶ ಮೇ 15ರಂದು ಬೆಳಗ್ಗೆ 5ಕ್ಕೆ ವೀರಾಪುರ ಓಣಿಯ ಅಂಜಲಿ ನಿವಾಸಕ್ಕೆ ಆಟೋ ಮೂಲಕ ಹೋಗಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತನಿಖಾ ತಂಡ ರಚಿಸಿಕೊಂಡು ಹಂತಕನಿಗೆ ಜಾಲ ಬೀಸಿದ್ದರು. ಹತ್ಯೆ ಖಂಡಿಸಿ ನಗರದಲ್ಲಿ ಪ್ರತಿಭಟನೆಗಳು ನಡೆದವು. ಅಂಜಲಿ ನಿವಾಸಕ್ಕೆ ಗೃಹ ಸಚಿವರು, ಸಚಿವರು ಹಾಗೂ ಶಾಸಕರು ಭೇಟಿ ನೀಡಿದ್ದರು. ಈ ಘಟನೆಗೂ ಹಿಂದಿನ ತಿಂಗಳಷ್ಟೇ ನೇಹಾ ಹಿರೇಮಠ ಹತ್ಯೆಯಾಗಿದ್ದರಿಂದ ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆದಿತ್ತು. ಸಾರ್ವಜನಿಕರ ಹಾಗೂ ಕುಟುಂಬಸ್ಥರ ಪ್ರತಿಭಟನೆಯ ಒತ್ತಡಕ್ಕೆ ಮಣಿದು ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.4 ಅಧಿಕಾರಿಗಳು ಅಮಾನತು
ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಿರ್ಲಕ್ಷ್ಯ ತೋರಿದ ಆಪಾದನೆಯಡಿ ರಾಜ್ಯ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ, ಹುಬ್ಬಳ್ಳಿ ದಕ್ಷಿಣ ಉಪ ವಿಭಾಗದ ಎಸಿಪಿ ಅವರನ್ನು ಅಮಾನತು ಮಾಡಿತ್ತು. ಇನ್ನು ಬೆಂಡಿಗೇರಿ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಮಹಿಳಾ ಮುಖ್ಯಪೇದೆಯನ್ನು ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದರು.