ಸಾರಾಂಶ
ರಾಮನಗರ: ಸ್ಕೂಲ್ ವ್ಯಾನ್ ಫೀಸ್ ಕಟ್ಟಿಲ್ಲ ಎಂದು ಮೂರನೇ ತರಗತಿ ವಿದ್ಯಾರ್ಥಿಯನ್ನು ಪರೀಕ್ಷೆಗೆ ಕೂರಿಸದೆ ಶಾಲಾ ಆಡಳಿತ ಮಂಡಳಿ ಅಮಾನವೀಯ ವರ್ತನೆ ತೋರಿದೆ ಎಂಬ ದೂರು ನಗರದ ನೇಟಸ್ ಇಂಟರ್ ನ್ಯಾಷನಲ್ ಶಾಲೆಯ ವಿರುದ್ಧ ಕೇಳಿಬಂದಿದೆ.
ಈ ಕುರಿತು ರಾಮನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿರುವ 3ನೇ ತರಗತಿ ವಿದ್ಯಾರ್ಥಿನಿ ಎನ್.ಎಲ್.ತನ್ವಿಗೌಡ ಅವರ ತಂದೆ ಲಿಂಗೇಶ್, ನನ್ನ ಮಗಳನ್ನು ಕ್ಷುಲ್ಲಕ ಕಾರಣಕ್ಕೆ ಕಿರುಪರೀಕ್ಷೆಯಿಂದ ಹೊರಗೆ ಕೂರಿಸಿ, ಮಗುವಿಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಇದಕ್ಕೆ ಕಾರಣವಾದ ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.ನನ್ನ ಮಗಳು ಮನೆಗೆ ಅಳುತ್ತಳೆ ಬಂದಿದ್ದಾಳೆ. ಏನೆಂದು ವಿಚಾರಿಸಿದರೆ ಸ್ಕೂಲ್ ವ್ಯಾನ್ ಫೀಸ್ ಕಟ್ಟಿಲ್ಲ ಎಂದು ನನಗೆ ಪರೀಕ್ಷೆಗೆ ಕೂರಿಸಲಿಲ್ಲ. ಲೈಬ್ರರಿಯಲ್ಲಿ ಕೂರಿಸಿದ್ದರು. ಪಪ್ಪಗೆ ಫೋನ್ ಮಾಡಿ ಎಂದೆ, ಆದರೂ ನನಗೆ ಪರೀಕ್ಷೆಗೆ ಕೂರಿಸಲಿಲ್ಲ ಎಂದಿದ್ದಾಳೆ. ಈ ಘಟನೆ ಕುರಿತು ನನ್ನ ಮಗಳು ಮಾನಸಿಕವಾಗಿ ನೊಂದಿದ್ದಾಳೆ ಎಂದು ಬಾಲಕಿ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಡೀ ವರ್ಷದ ಶಾಲಾ ಶುಲ್ಕ 65 ಸಾವಿರ ಮೊತ್ತವನ್ನು ಒಮ್ಮೆಯೇ ಪಾವತಿ ಮಾಡಿದ್ದೇನೆ. ಮೂರು ತಿಂಗಳಿಂದ ವ್ಯಾನ್ ಶುಲ್ಕ ಪಾವತಿ ಮಾಡಿಲ್ಲ ಎಂದು ಸೋಮವಾರ ಶಾಲೆಯಲ್ಲಿ ನಡೆದಿರುವ ಕಿರು ಪರೀಕ್ಷೆಯಲ್ಲಿ ನನ್ನ ಮಗಳನ್ನು ಕೂರಿಸದೆ ಗ್ರಂಥಾಲಯದಲ್ಲಿ ಕೂರಿಸಿದ್ದಾರೆ ಎಂದು ತಂದೆ ಲಿಂಗೇಶ್ ಆರೋಪಿಸಿದ್ದಾರೆ.ನನ್ನ ಮಗಳು ಶಾಲೆಯಲ್ಲಿ ಒಬ್ಬಳೇ ಕುಳಿತು ಮಾನಸಿಕವಾಗಿ ಕಿರಿಕಿರಿ ಅನುಭವಿಸಿದ್ದು, ಮನೆಗೆ ಬಂದಾಗ ವಿಷಯ ತಿಳಿಸಿದ್ದಾಳೆ. ಈ ಬಗ್ಗೆ ಪ್ರಶ್ನಿಸಲು ಶಾಲೆಗೆ ಕರೆಮಾಡಿದರೆ ಯಾರೂ ಕರೆಸ್ವೀಕರಿಸುತ್ತಿಲ್ಲ. ಆಡಳಿತ ಮಂಡಳಿ ಮುಖ್ಯಸ್ಥರು ಸ್ಪಂದಿಸುತ್ತಿಲ್ಲ. ವಾಹನದ ಶುಲ್ಕ ಬಾಕಿ ಇದ್ದರೆ ಪೋಷಕರಿಗೆ ತಿಳಿಸಿದ್ದರೆ ಪಾವತಿ ಮಾಡುತ್ತಿದ್ದೆವು. ಆದರೆ, ಮಗುವಿಗೆ ಅವಮಾನವಾಗುವ ರೀತಿ ಮಾಡಿರುವ ಶಾಲಾ ಆಡಳಿತ ಮಂಡಳಿ ಕ್ರಮ ಸರಿಯಲ್ಲ ಎಂದು ಅವರು ದೂರಿನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಟ್...............ಈ ಶಾಲಾ ಆಡಳಿತ ಮಂಡಳಿ ಹಲವಾರು ಮಕ್ಕಳಿಗೆ ಇದೇ ರೀತಿ ಕಿರಿಕಿರಿ ನೀಡುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಬೇಕು. ನನ್ನ ಮಗುವಿಗೆ ಆಗಿರುವ ಮಾನಸಿಕ ನೋವಿಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಕ್ಕೂ ದೂರು ನೀಡುತ್ತೇನೆ. ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮಕ್ಕೆ ಹೋರಾಟ ನಡೆಸುತ್ತೇನೆ. -ಲಿಂಗೇಶ್, ಬಾಲಕಿ ತಂದೆ
ಕೋಟ್....................ಪೋಷಕರಿಂದ ದೂರು ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಡಿಡಿಪಿಐ ಅವರಿಗೆ ವರದಿ ನೀಡುತ್ತೇನೆ.
-ಸೋಮಲಿಂಗಯ್ಯ, ಬಿಇಒ