ಸಾರಾಂಶ
ಲೋಕಾಪುರ ಸಮೀಪದ ಜಾಡರ ಅರಳಿಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಸಮೀಪದ ಜಾಡರ ಅರಳಿಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.ಭಾಗ್ಯಶ್ರೀ ಮಲ್ಲಪ್ಪ ಪಡೆಪ್ಪನವರ(೧೬) ಮೃತ ಬಾಲಕಿ. ಮಲ್ಲಾಪುರ ಪಿಎಲ್ ಗ್ರಾಮದ ನಿವಾಸಿಯಾದ ಬಾಲಕಿ ತಂದೆ ಜೊತೆಗೆ ಹೊಲಕ್ಕೆ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಭೇಟಿ ನೀಡಿ ಮೃತಳ ತಂದೆ ಮತ್ತು ಸಂಬಂಧಿಕರಿಗೆ ಸಚಿವರು ಸಾಂತ್ವನ ಹೇಳಿದರು. ಘಟನೆ ನೋವು ತಂದಿದೆ. ದೇವರು ಆ ಕುಟುಂಬಕ್ಕೆ ಧೈರ್ಯ ತುಂಬಲಿ, ಮೃತ ಕುಟುಂಬಕ್ಕೆ ಸರ್ಕಾರದಿಂದ ₹ ೫ ಲಕ್ಷ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಪ್ರಭಾರ ಉಪ ತಹಸೀಲ್ದಾರ್ ಸತೀಶ ಬೇವೂರ ಮಾತನಾಡಿ, ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಬಿಡುಗಡೆ ಮಾಡಿರುವ ಮೊಬೈಲ್ ಆ್ಯಪ್‌ಗಳಾದ ಧಾಮಿನಿ ಮತ್ತು ಸಿಡಿಲು ಇವುಗಳನ್ನು ಸಾರ್ವಜನಿಕರು ಬಳಸಿಕೊಂಡು ಸಿಡಿಲಿನ ಮುನ್ಸೂಚನೆ ಪಡೆದು ಸಂಭವನೀಯ ಅನಾಹುತ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.ತಹಸೀಲ್ದಾರ್ ಎ.ಕೆ. ಇಂಡೀಕರ, ಗ್ರಾಮ ಲೆಕ್ಕಾಧಿಕಾರಿ ವೆಂಕಪ್ಪ ಕೊಳಚಿ, ಹಣಮಂತ ಆಮಾತಿ, ಈರಣ್ಣ ಕವಳ್ಳಿ, ಪಿಎಸ್‌ಐ ರಾಕೇಶ ಬಗಲಿ ಹಾಗೂ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.