ಪ್ರೇಯಸಿ ಆತ್ಮಹತ್ಯೆ: ನೊಂದ ಪ್ರಿಯಕರ ರೈಲಿನಡಿಗೆ ತಲೆಯಿಟ್ಟು ಸಾವು

| Published : May 20 2024, 01:35 AM IST

ಸಾರಾಂಶ

ಅಪಘಾತದ ತೀವ್ರತೆಗೆ ರೈಲು ಕಾರ್ತಿಕ್ ಪೂಜಾರಿಯನ್ನು ಮಾರುದ್ದ ಎಳೆದುಕೊಂಡು ಹೋಗಿದ್ದು ದೇಹ ಗುರುತಿಸಲಾಗದಷ್ಟು ಛಿದ್ರವಾಗಿದೆ. ಮೂಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಶಾಲಾ ದಿನಗಳಿಂದ ಪ್ರೀತಿಸುತ್ತಿದ್ದ ಪ್ರೇಯಸಿಯ ಆತ್ಮಹತ್ಯೆಯಿಂದ ಮನನೊಂದ ಪ್ರಿಯಕರ ಬೆಂಗಳೂರಿನಿಂದ ಮೂಲ್ಕಿಗೆ ಆಗಮಿಸಿ ಮನೆ ಸಮೀಪದ ಮೈಲೊಟ್ಟು ಎಂಬಲ್ಲಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೈಲೊಟ್ಟು ನಿವಾಸಿ ಕಾರ್ತಿಕ್‌ (20) ಆತ್ಮಹತ್ಯೆ ಮಾಡಿಕೊಂಡವನು. ಶಾಲಾ ದಿನಗಳಿಂದಲೂ ತನ್ನ ಸಹಪಾಠಿ, ಮೂಡುಬಿದಿರೆ ಮಾರ್ಪಾಡಿ ಗ್ರಾಮದ ನಾಗರಕಟ್ಟೆಯ ಶರಣ್ಯ (19) ಳನ್ನು ಪ್ರೀತಿಸುತ್ತಿದ್ದ. ಹುಡುಗಿಯ ಮನೆಯವರಿಗೆ ವಿಷಯ ಗೊತ್ತಾಗಿ 10ನೇ ತರಗತಿ ಬಳಿಕ ಹುಡುಗಿಯನ್ನು ಮೂಲ್ಕಿಯಿಂದ ಕಟೀಲು ಕಾಲೇಜಿಗೆ ಸೇರಿಸಿದ್ದರು. ಬಳಿಕ ಮೂಡುಬಿದಿರೆ ಕಾಲೇಜಿನಲ್ಲಿ ಪದವಿ ಕಲಿಯುತ್ತಿದ್ದ ಶರಣ್ಯಳನ್ನು ಹೆತ್ತವರು ಅರ್ಧಕ್ಕೇ ಕಾಲೇಜು ಬಿಡಿಸಿ ಮನೆಗೆ ಕರೆದುಕೊಂಡು ಬಂದಿದ್ದು. ಮನೆಯಲ್ಲೇ ಇದ್ದ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಶುಕ್ರವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ತನ್ನ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಕಾರ್ತಿಕ್ ಪೂಜಾರಿ ತನ್ನ ತಾಯಿ ಅಜ್ಜಿ ಜೊತೆ ಮೈಲೊಟ್ಟಿನಲ್ಲಿ ನೆಲೆಸಿದ್ದು ಕಳೆದ ಕೆಲವು ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಸಂಬಂಧಿಕರ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದ್ದ. ಪ್ರೇಯಸಿಯ ಆತ್ಮಹತ್ಯೆ ವಿಷಯ ತಿಳಿದು ಚಿತ್ರದುರ್ಗದಲ್ಲಿದ್ದ ಕಾರ್ತಿಕ್ ಪೂಜಾರಿ ಏಕಾಏಕಿ ಶನಿವಾರ ಸಂಜೆ ಮನೆಗೆ ಬಂದಿದ್ದ. ತಾಯಿ ತುರ್ತು ಕೆಲಸ ನಿಮಿತ್ತ ಕೇರಳಕ್ಕೆ ಹೋಗಿ ಭಾನುವಾರ ಬೆಳಗ್ಗೆ ಬರುವಷ್ಟರಲ್ಲಿ ಕಾರ್ತಿಕ್ ತನ್ನ ಮನೆಯ ಅನತಿ ದೂರದಲ್ಲಿರುವ ರೈಲು ಹಳಿಯಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಪಘಾತದ ತೀವ್ರತೆಗೆ ರೈಲು ಕಾರ್ತಿಕ್ ಪೂಜಾರಿಯನ್ನು ಮಾರುದ್ದ ಎಳೆದುಕೊಂಡು ಹೋಗಿದ್ದು ದೇಹ ಗುರುತಿಸಲಾಗದಷ್ಟು ಛಿದ್ರವಾಗಿದೆ. ಮೂಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.