ಬೆಂಗಳೂರಿನ ಯುವತಿಗೆ ಎಸ್‌ಐಟಿಯಿಂದ ನೋಟಿಸ್‌ ನೀಡಿದ್ದು, ಜರ್ಮನಿ ಸ್ನೇಹಿತರ ಮೂಲಕ ಪ್ರಜ್ವಲ್‌ಗೆ ಹಣ ಕಳಿಸಿದ್ದಳು ಎಂಬ ಆರೋಪದ ಮೇಲೆ ಸಮನ್ಸ್‌ ನೀಡಲಾಗಿದೆ.

 ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹಣಕಾಸು ನೆರವು ನೀಡಿದ್ದ ತಪ್ಪಿಗೆ ಅವರ ಗೆಳತಿಯೊಬ್ಬರಿಗೆ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆಯ ಸಂಕಷ್ಟ ಎದುರಾಗಿದೆ.

ಪ್ರಜ್ವಲ್‌ ಅವರ ಗೂಗಲ್ ಪೇ ಮಾಹಿತಿಯನ್ನು ಪರಿಶೀಲಿಸಿದಾಗ ವಿದೇಶದಲ್ಲಿದ್ದ ಅವಧಿಯಲ್ಲಿ ಅವರಿಗೆ ಹಣಕಾಸು ಸಹಕಾರ ಕೊಟ್ಟವರ ವಿವರ ಬಯಲಾಗಿದೆ. ತಮ್ಮ ಸ್ನೇಹಿತರ ಮೂಲಕ ಪ್ರಜ್ವಲ್ ಅವರಿಗೆ ನಿಯಮಿತವಾಗಿ ಗೆಳತಿ ಹಣಕಾಸಿನ ನೆರವು ನೀಡಿದ್ದರು. ಈ ಮಾಹಿತಿ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆಕೆಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ವಿದೇಶದಲ್ಲಿ ತಮಗೆ ನೆರವಾದರ ಬಗ್ಗೆ ಪ್ರಜ್ವಲ್ ಬಾಯ್ಬಿಡುತ್ತಿಲ್ಲ. ಹಣ ವರ್ಗಾವಣೆ ಕುರಿತು ಕೇಳಿದರೂ ಸಹ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಆದರೆ ಪ್ರಜ್ವಲ್‌ಗೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆ ಬ್ಯಾಂಕ್‌ಗಳಿಂದ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಲಾಗಿದೆ. ಈ ಮಾಹಿತಿ ಆಧರಿಸಿಯೇ ಅವರ ತನಿಖೆ ನಡೆದಿದೆ.

ಹಲವು ದಿನಗಳಿಂದ ಬೆಂಗಳೂರಿನ ಯುವತಿ ಜತೆ ಪ್ರಜ್ವಲ್‌ಗೆ ಸ್ನೇಹವಿದೆ. ಜರ್ಮನ್ ದೇಶದಲ್ಲಿ ಆಕೆಯ ಸ್ನೇಹಿತರು ಹಾಗೂ ಸೋದರ ಸಂಬಂಧಿಗಳು ನೆಲೆಸಿದ್ದಾರೆ. ಹೀಗಾಗಿ ಪ್ರಜ್ವಲ್‌ ವಿದೇಶದಲ್ಲಿದ್ದಾಗ ತನ್ನ ಸ್ನೇಹಿತರ ಮೂಲಕ ಆಕೆ ಸಹಾಯ ಮಾಡಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಆ ಗೆಳತಿಯ ವಿಚಾರಣೆ ಬಳಿಕ ಹಣ ವರ್ಗಾವಣೆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮೂಲಗಳು ಹೇಳಿವೆ.