ಶೋಕಸಾಗರದ ಮಧ್ಯೆ ಬಾಲಕಿ ಅಂತ್ಯಸಂಸ್ಕಾರ

| Published : Apr 15 2025, 12:49 AM IST

ಸಾರಾಂಶ

ಬಿಹಾರ ಮೂಲದ ವ್ಯಕ್ತಿಯ ಪೈಶಾಚಿಕ ಕೃತ್ಯಕ್ಕೆ ಬಲಿಯಾದ 5 ವರ್ಷದ ಬಾಲಕಿ ಆಧ್ಯಾ ಸಾಯಿ ಅಂತ್ಯಸಂಸ್ಕಾರ ಇಲ್ಲಿನ ದೇವಾಂಗಪೇಟೆಯ ರುದ್ರಭೂಮಿಯಲ್ಲಿ ಸೋಮವಾರ ಶೋಕಸಾಗರದ ಮಧ್ಯೆ ನೆರವೇರಿತು.

ಹುಬ್ಬಳ್ಳಿ: ಬಿಹಾರ ಮೂಲದ ವ್ಯಕ್ತಿಯ ಪೈಶಾಚಿಕ ಕೃತ್ಯಕ್ಕೆ ಬಲಿಯಾದ 5 ವರ್ಷದ ಬಾಲಕಿ ಆಧ್ಯಾ ಸಾಯಿ ಅಂತ್ಯಸಂಸ್ಕಾರ ಇಲ್ಲಿನ ದೇವಾಂಗಪೇಟೆಯ ರುದ್ರಭೂಮಿಯಲ್ಲಿ ಸೋಮವಾರ ಶೋಕಸಾಗರದ ಮಧ್ಯೆ ನೆರವೇರಿತು.

ಮೃತ ಬಾಲಕಿಯ ಪಾರ್ಥಿವ ಶರೀರವನ್ನು ಇಲ್ಲಿನ ಕೆಎಂಸಿಆರ್‌ಐ ಶವಾಗಾರದಲ್ಲಿ ರಾತ್ರಿಯಿಡೀ ಇರಿಸಲಾಗಿತ್ತು. ಕುಟುಂಬಸ್ಥರು ಶವಾಗಾರದ ಮುಂದೆಯೇ ಕುಳಿತು ರೋಧಿಸುತ್ತಿದ್ದರು. ಜನತೆ ಕೂಡ ಈ ದುಃಖದಲ್ಲಿ ಭಾಗಿಯಾಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.

ತಾಲೂಕು ದಂಡಾಧಿಕಾರಿ ಆರ್.ಕೆ. ಪಾಟೀಲ ಸಮ್ಮುಖದಲ್ಲಿ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ತಂಡ, ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ಅಲ್ಲಿಂದ ಮೆರವಣಿಗೆ ಮೂಲಕ ಸಂತೋಷನಗರದಲ್ಲಿನ ತಮ್ಮ ಬಾಡಿಗೆ ಮನೆಗೆ ತೆಗೆದುಕೊಂಡು ಬಂದ ಕುಟುಂಬಸ್ಥರು, ಅಲ್ಲಿ ಕೆಲಕಾಲ ಅಂತಿಮ ದರ್ಶನಕ್ಕಿಟ್ಟು ಬಳಿಕ ದೇವಾಂಗಪೇಟೆಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಹಾಲುಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನ ಪೂರೈಸಿದ ಬಾಲಕಿಯ ತಂದೆ ಶರಣಪ್ಪ ಕುರಿ, ಅಗ್ನಿ ಸ್ಪರ್ಶಿಸಿದರು.

ಮಗಳನ್ನು ಕಳೆದುಕೊಂಡ ಶರಣಪ್ಪ- ಲತಾ ದಂಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಮಗಳೆ ಮಗಳೆ ಎಂದು ರೋಧಿಸುತ್ತಿದ್ದ ಅವರಿಗೆ ಅಲ್ಲಿ ನೆರೆದಿದ್ದವರೆಲ್ಲ ಎಷ್ಟೇ ಸಾಂತ್ವನ ಹೇಳಿದರೂ ಹೆತ್ತ ಕರುಳು ಹಲುಬುತ್ತಲೇ ಇತ್ತು. ಇದನ್ನು ಕಂಡ ನೆರೆದವರ ಕಣ್ಣಾಲಿಗಳು ತೆವವಾಗಿದ್ದವು.

ಪುಟ್ಟ ಜೀವಕ್ಕೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಸಾರ್ವಜನಿಕರು ಕಣ್ಣೀರಿಟ್ಟರು. ಕೊಪ್ಪಳ ಜಿಲ್ಲೆಯಿಂದ ಸಂಬಂಧಿಕರು ಆಗಮಿಸಿದ್ದರು. ಜತೆಗೆ ನಗರದ ಜನತೆ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಗಣ್ಯಾತಿ ಗಣ್ಯರು ಬಾಲಕಿಯ ಅಂತಿಮ ದರ್ಶನ ಪಡೆದರು. ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್, ಡಿಸಿಪಿಗಳಾದ ರವೀಶ, ಮಹಾನಿಂಗ ನಂದಗಾಂವಿ ಸೇರಿದಂತೆ ಹಲವು ಅಧಿಕಾರಿಗಳಿದ್ದರು.

ಕ್ಷಮಿಸು ಮಗಳೇ..!

"ಯವ್ವಾ ಮಗಳೇ ನನ್ನನ್ನು ಕ್ಷಮಿಸಿ ಬಿಡ ಬೇ.. ಮಗಳಾಗಿ ಹುಟ್ಟಿದ್ದ ನಿನ್ನ ರಕ್ಷಿಸಿಕೊಳ್ಳಲು ನನ್ನ ಕಡೆ ಆಗಲಿಲ್ಲ. ಕ್ಷಮಿಸಿ ಬಿಡ ಬೇ ತಾಯಿ.. ಹ್ಯಾಂಗ್‌ ನಮ್ಮನ್ನೆಲ್ಲ ಬಿಟ್ಟು ಹೋದಿ ಬೇ ಹೊಳ್ಳಿ ಬಾರಬೇ..! "

ಆಗಂತುಕನ ನೀಜಕೃತ್ಯಕ್ಕೆ ಬಲಿಯಾದ ಬಾಲೆಯ ತಂದೆ ಶರಣಪ್ಪ ಕುರಿ ಹೀಗೆ ರೋಧಿಸುತ್ತಿದ್ದರೆ, ನೆರೆದಿದ್ದವರ ಎದೆಯಲ್ಲಿ ಬಿಸಿನೀರ ಕುದಿ.

ತಂದೆ- ತಾಯಿ ಕೂಗಿ ಕೂಗಿ ಅಳುತ್ತಿದ್ದರೆ, ಸೇರಿದ್ದ ಸಾವಿರಾರು ಜನರ ಕಣ್ಣಾವೆಗಳಲ್ಲಿ ನೀರು. ಆ ಕುಟುಂಬದ ಪರಿಚಯ ಇಲ್ಲದವರು ಕೂಡ ಮಗುವಿನ ಸಾವನ್ನು ಕಂಡು ಮಮ್ಮಲ ಮರಗುತ್ತಾ, ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದರು.

ಕೊಪ್ಪಳದಿಂದ ಬಂದಿದ್ದ ನೆಂಟರಿಸ್ಟರು, ಬಡವರ ಮನೆಯ ಹೆಣ್ಣಾಗಿ ಹುಟ್ಟಬಾರದು ಎಂದು ನಿಟ್ಟುಸಿರು ಹಾಕುತ್ತಿದ್ದರು. ಬಾಲಕಿಗೆ ಆದ ಅನ್ಯಾಯ ಮತ್ತೆ ಯಾರಿಗೂ ಆಗಬಾರದು. ಸರ್ಕಾರ ಕ್ರಮ ಕೈಗೊಳ್ಳಬೇಕ್ರಿ ಎಂದು ರೋದಿಸುತ್ತಲೇ ಆಗ್ರಹಿಸುತ್ತಿದ್ದರು.