ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಅಗತ್ಯ: ಜಲಜಾ ಶೇಖರ್‌

| Published : Dec 25 2024, 12:47 AM IST

ಸಾರಾಂಶ

ಕೊಡಗು ಜಿಲ್ಲಾ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತೋಳೂರುಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಮಂಗಳವಾರ ದಿ. ಪಿ.ಎಸ್.ಬೀರಪ್ಪ ದತ್ತಿನಿಧಿ ಕಾರ್ಯಕ್ರಮದಲ್ಲಿ ‘ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ’ ವಿಷಯದಲ್ಲಿ ಉಪನ್ಯಾಸ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಗಳಿಸಿಕೊಳ್ಳಬೇಕಾದರೆ ಉನ್ನತ ಶಿಕ್ಷಣ ಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಜಲಜಾ ಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲಾ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತೋಳೂರುಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ದಿ. ಪಿ.ಎಸ್.ಬೀರಪ್ಪ ದತ್ತಿನಿಧಿ ಕಾರ್ಯಕ್ರಮದಲ್ಲಿ ‘ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ’ ವಿಷಯದಲ್ಲಿ ಉಪನ್ಯಾಸ ನೀಡಿದರು.

ಶಿಕ್ಷಣ ಮಾನವನ ಬದುಕಿನ ಮೈಲಿಗಲ್ಲು. ಶಿಕ್ಷಣದಿಂದ ಸಂಸ್ಕೃತಿ, ಸಂಸ್ಕಾರ, ಜ್ಞಾನ ಸಂಪಾದಿಸಬಹುದು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಮೂಲಕ ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳಬೇಕು ಎಂದರು.

ದೇಶದಲ್ಲಿ ಹೊಸಶಿಕ್ಷಣ ನೀತಿ ಜಾರಿಯ ನಂತರ ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಉಚಿತ ಶಿಕ್ಷಣ ದೊರೆಯುತ್ತಿದೆ. ಸರ್ಕಾರ ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ದೇಶದಲ್ಲಿ ಮಹಿಳಾ ಸ್ವಾಂತತ್ರ್ಯ ಕಿತ್ತುಕೊಂಡು ಮಹಿಳೆಯರು ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದ ಸಂದರ್ಭ 12ನೇ ಶತಮಾನದಲ್ಲಿ ಮಹಿಳೆಯರನ್ನು ಕತ್ತಲಲ್ಲಿ ಇಟ್ಟು ಸಮಾಜ ಕಟ್ಟಲು ಸಾಧ್ಯವಿಲ್ಲ ಎಂಬುದು ಶರಣರಿಗೆ ತಿಳಿಯಿತು. ಅಂದೆ ಅನುಭವ ಮಂಟಪ ಸ್ಥಾಪಿಸಿ, ಹೆಣ್ಣುಮಕ್ಕಳಿಗೆ ಸ್ಥಾನಮಾನಗಳನ್ನು ಕೊಡುವ ಪ್ರಯತ್ನ ಮಾಡಿದರು. ೩೩ ವಚನಕಾರ್ತಿಯರು ಸಾಹಿತ್ಯ ಕೃಷಿ ಮಾಡಿ ಯಶ ಕಂಡರು ಎಂದು ಹೇಳಿದರು.

ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮಾತನಾಡಿ, ಇಂಗ್ಲಿಷ್ ಸೇರಿದಂತೆ ಬೇರೆ ಭಾಷೆಗಳನ್ನು ಕಲಿಯಲೇ ಬೇಕು. ಆದರೆ ಮಾತೃಭಾಷೆ ಕನ್ನಡವನ್ನು ಪ್ರತಿನಿತ್ಯ ಮಾತನಾಡಬೇಕು. ಮಾತೃಭಾಷೆ ಕಡೆಗಣಿಸಿದರೆ, ಹೆತ್ತ ತಾಯಿಯನ್ನು ಕಡೆಗಣಿಸಿದಂತೆ. ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು ಎಂದರು.

ಕ.ಸಾ.ಪ.ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ, ಶಾಂತಳ್ಳಿ ಹೋಬಳಿ ಅಧ್ಯಕ್ಷ ಸಿ.ಎಸ್.ನಾಗರಾಜು, ತಾಲೂಕು ಕ.ಸಾ.ಪ ಸ್ಥಾಪಕ ಅಧ್ಯಕ್ಷ ಜೆ.ಸಿ.ಶೇಖರ್, ಪದಾಧಿಕಾರಿಗಳಾದ ಜ್ಯೋತಿ ಅರುಣ್, ಕೆ.ಪಿ.ದಿನೇಶ್, ಜಗದೀಶ್, ಜಮೀರ್, ಸುರೇಶ್ ಇದ್ದರು.