ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶುಚಿ ಬಳಸಿ ಮುಟ್ಟಿನ ಶುಚಿತ್ವವನ್ನು ಕಾಪಾಡಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ಕರೆ ನೀಡಿದರು.
ಗುರುವಾರ ತಾಲೂಕಿನ ಸೌತಿಕೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಹದಿಹರೆಯದ ಹೆಣ್ಣು ಮಕ್ಕಳಿಗೆ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹದಿ ಹರಿಯದ ಹೆಣ್ಣು ಮಕ್ಕಳ ಮುಟ್ಟಿನ ನೈರ್ಮಲ್ಯ ಕ್ಕಾಗಿ ಸರ್ಕಾರ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮೂಲಕ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಋತುಸ್ರಾವದ ಬಗ್ಗೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಟ್ಟಿನ ನೈರ್ಮಲ್ಯ ಕಾಪಾಡದಿದ್ದಲ್ಲಿ ಹೆಣ್ಣು ಮಕ್ಕಳು ಅನೇಕ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಎಲ್ಲಾ ಸರ್ಕಾರಿ, ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನಾಪ್ಕಿನ್ ವಿತರಿಸಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಸದುಪಯೋಗಪಡೆಯಲು ಹಾಗೂ ಬಳಸಿದ ನ್ಯಾಪ್ಕಿನ್ ಸರಿಯಾಗಿ ವಿಲೇವಾರಿ ಮಾಡಲು ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.ಅತಿಥಿಯಾಗಿದ್ದ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಭರತ್ ಮಾತನಾಡಿ, ಹದಿ ಹರೆಯದಲ್ಲಿ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಕಲಿಕೆಯಲ್ಲಿ ಆಸಕ್ತಿ ವಹಿಸಲು ಮತ್ತು ಗ್ರಹಿಸಲು ಹೆಚ್ಚಿನ ಒತ್ತು ಕೊಡಬೇಕು. ಹದಿಹರೆಯದಲ್ಲಿ ಋತುಸ್ರಾವ ಒಂದು ಸಾಮಾನ್ಯ ಪ್ರಕ್ರಿಯೆ. ಹೆಣ್ಣು ಮಕ್ಕಳು ಯಾವುದೇ ಸಂಕೋಚ ಪಡದೆ ಯಾವುದಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ಪಡೆದು ಆರೋಗ್ಯದಿಂದಿರಬೇಕು. ಮಾರ್ಗದರ್ಶನಕ್ಕಾಗಿ ಸದಾ ಆರೋಗ್ಯ ಇಲಾಖೆ ಸಿಬ್ಬಂದಿ ಸಿದ್ಧವಾಗಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಶುಚಿ ಸ್ಯಾನಿಟರಿ ವಿತರಿಸಿ ಬಳಸುವ ಮತ್ತು ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ.ಕ್ಷಮ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ಡೈಸಿ, ಶೋಭಿ, ಸಮುದಾಯ ಆರೋಗ್ಯ ಅಧಿಕಾರಿ ಮಿನಿ, ಆಪ್ತ ಸಮಾಲೋಚಕ ಆರ್.ಕೆ.ಸುಹಾಸ್,ಕು.ದಿವ್ಯ ಉಪಸ್ಥಿತರಿದ್ದರು.