ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ 2024-25ನೇ ಸಾಲಿನ ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಹಾಗೂ ನಿಯಮ-2006ರ ಅನುಷ್ಠಾನದಲ್ಲಿ ಭಗಿದಾರ ಇಲಾಖೆಗಳ ಪಾತ್ರ ಕುರಿತು ಎರಡು ದಿನಗಳ ಓರಿಯಂಟೇಷನ್ ತರಬೇತಿ ಕಾರ್ಯಾಗಾರ”ವನ್ನು ಮಡಿಕೇರಿ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಇವರು ಉದ್ಘಾಟಿಸಿ ಮಾತನಾಡಿ ಎಲ್ಲಾ ಹೆಣ್ಣು ಮಕ್ಕಳು ಪೂಜಿಸಲ್ಪಡುವವರಾಗಿದ್ದು, ಇವರಲ್ಲಿ ಅಷ್ಟದೇವತೆಗಳು ನೆಲೆಸುತ್ತಾರೆ. ಪ್ರತಿ ಮನೆಯ ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು, ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂದು ಹೇಳಿದರು.
ಸ್ತ್ರೀ ಶಕ್ತಿ ಒಕ್ಕೂಟದ ರಾಜ್ಯಧ್ಯಕ್ಷರಾದ ರೆಹನಾ ಸುಲ್ತಾನ ಅವರು ಮಾತನಾಡಿ, ಮಹಿಳೆಯರು ಮನೆಯಿಂದ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಹಿಳೆಯರು ಸಮಾಜ ಸೇವೆಗೆ ಹೆಚ್ಚು ಒತ್ತು ನೀಡಿ ಸಮಾಜ ಸೇವೆಯಲ್ಲಿ ತೊಡಗೋಣ ಎಂದು ಹೇಳಿದರು.ಪೊನ್ನಂಪೇಟೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಪೂಣಚ್ಚ ಅವರು ಮಾತನಾಡಿ, ತಾಲೂಕು ಮಟ್ಟದಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನಃಶಾಸ್ತ್ರಜ್ಞರಾದ ಡಾ.ಯಾಮಿನಿ ಮಾತನಾಡಿ, ಮಹಿಳೆಯರು ಇಂದು ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿದ್ದು ಹಾಗೂ ಆರ್ಥಿಕವಾಗಿ ಸಬಲರಾಗಿದ್ದು ಅಲ್ಲದೆ ಸಹನಾಮಯಿಯಾಗಿರುವುದು ನಾವು ಕಾಣಬಹುದು ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ ಮಾತನಾಡಿ, ಮಹಿಳೆಯರಿಗೆ ಕಾನೂನಾತ್ಮಕ ಅಂಶಗಳು, ಆರೋಗ್ಯ ಸೇವೆಗಳು, ಕೌಟುಂಬಿಕ ದೌರ್ಜನ್ಯ ಈ ಎಲ್ಲಾ ಮಾಹಿತಿಯನ್ನು ತಿಳಿಸಲು ಕಾರ್ಯಾಗಾರ ಏರ್ಪಡಿಸಲಾಗಿದ್ದು, ಎಲ್ಲ ತರಬೇತುದಾರರು ಈ ಸೌಲಭ್ಯವನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ವಕೀಲರಾದ ಮೀನಕುಮಾರಿ ಮಾತನಾಡಿ ಮಕ್ಕಳ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ದೌರ್ಜನ್ಯ ತಡೆ ಕಾಯ್ದೆ 2013ರ ಕುರಿತು ಮಾಹಿತಿ ನೀಡಿದರು.ನಂತರ ಮೊತ್ತೊರ್ವ ಸಂಪನ್ಮೂಲ ವ್ಯಕ್ತಿಯಾದ ಪೋಲಿಸ್ ಇಲಾಖೆಯ ಸುಮತಿ ಮಾತನಾಡಿ ಮಹಿಳೆಯರಿಗೆ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ 112 ಗೆ ಕರೆ ಮಾಡಬೇಕು. ಮಹಿಳೆಯರು, ಹೆಣ್ಣು ಮಕ್ಕಳು ಜಾಗ್ರತೆಯಿಂದ ಇರಬೇಕು. ಮೊಬೈಲ್ ಚಟಕ್ಕೆ ಬಲಿಯಾಗಿ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಸಂಸಾರೀಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಆದರೆ ಸರ್ಕಾರ ಮಹಿಳೆಯರ ರಕ್ಷಣೆ ಮತ್ತು ಸುಭದ್ರತೆಗೆ ಹಲವಾರು ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೊಳಿಸಿದ್ದು ಅವುಗಳಲ್ಲಿ ಮಹಿಳಾ ಸಾಂತ್ವನ, ಮಹಿಳಾ ಸಹಾಯವಾಣಿ, ಮಹಿಳಾ ಸಬಲೀಕರಣ ಘಟಕ, ಸಖಿ ಸೆಂಟರ್ ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಯಿತು.
ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನೆರವೇರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತ ಸ್ವಾಗತಿಸಿದರು. ಉಪ ನಿರ್ದೇಶಕರ ಕಚೇರಿ ಹಿರಿಯ ಮೇಲ್ವಿಚಾರಕಿಯಾದ ಜಯಂತಿ ವಂದಿಸಿದರು. ಸಖಿ ಒನ್ ಸ್ಟಾಪ್ ಸೆಂಟರ್ ಕುಮುದ ಪ್ರಾರ್ಥಿಸಿದರು.