ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು: ಮಲ್ಲಿಕಾ

| Published : Mar 20 2025, 01:17 AM IST

ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು: ಮಲ್ಲಿಕಾ
Share this Article
  • FB
  • TW
  • Linkdin
  • Email

ಸಾರಾಂಶ

21ನೇ ಶತಮಾನದಲ್ಲಿ ಮಹಿಳೆಯರ ಪಾತ್ರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖವಾಗಿದ್ದು, ಎಲ್ಲಾ ದುಡಿಯುವ ವರ್ಗದ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು ಎಂದು ತಾಲೂಕು ಕಚೇರಿ ಹಕ್ಕು ದಾಖಲೆಗಳ ಅಧಿಕಾರಿ ಮಲ್ಲಿಕಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

21ನೇ ಶತಮಾನದಲ್ಲಿ ಮಹಿಳೆಯರ ಪಾತ್ರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖವಾಗಿದ್ದು, ಎಲ್ಲಾ ದುಡಿಯುವ ವರ್ಗದ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು ಎಂದು ತಾಲೂಕು ಕಚೇರಿ ಹಕ್ಕು ದಾಖಲೆಗಳ ಅಧಿಕಾರಿ ಮಲ್ಲಿಕಾ ತಿಳಿಸಿದರು.

ನಗರದ ವಾಪಸಂದ್ರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯರು ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಜೀವಿಸಬೇಕಾದ ನಾವು ಅಬಲೆಯರಲ್ಲ, ಪುರಷನಂತೆ ಸಬಲರು ಎಂಬ ಆತ್ಮವಿಶ್ವಾಸ ಬೆಳೆಸಿಕೊಂಡು ಮುಂದೆ ಸಾಗಬೇಕು. ಆಗ ಮಾತ್ರವೇ ನಮ್ಮ ಹೆಜ್ಜೆಗುರುತುಗಳನ್ನು ಮೂಡಿಸಲು ಸಾಧ್ಯ. ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ಜ್ಯೋತಿಬಾಪುಲೆ, ಸರೋಜಿನಿನಾಯ್ಡು,ಸುನೀತಾ ವಿಲಿಯಮ್ಸ್ , ಸಾಲುಮರದ ತಿಮ್ಮಕ್ಕ, ಸುಧಾ ನಾರಾಯಣ ಮೂರ್ತಿ ಸೇರಿದಂತೆ ಹಲವು ಮಹಿಳೆಯರು ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿದಾಯಕರಾಗಿದ್ದಾರೆ ಎಂದರು.

ಶಿಕ್ಷಕಿ ವೃತ್ತಿ ಬಹಳ ಉನ್ನತವಾದ ವೃತ್ತಿಯಾಗಿದ್ದು, ಪ್ರತಿ ಶಿಕ್ಷಕಿಯೂ ಸಂತೋಷದಿಂದ ಮಕ್ಕಳ ಕಲಿಕೆಗೆ ಮುಂದಾಗಿ. ಜೀವನವನ್ನು ಕೂಡ ಸಂತೋಷದಿಂದ ಕಳೆಯಿರಿ. ನಮ್ಮ ಕೆಲಸದಿಂದ ನಮಗೇ ಆತ್ಮತೃಪ್ತಿ ದೊರಕುವಂತಿರಲಿ. ಪ್ರತಿ ಕೆಲಸದಲ್ಲಿಯೂ ದೇವರನ್ನು ಕಾಣಬೇಕು. ಇಂದಿನ ಉದ್ಯೋಗಕ್ಕೆ ತಾಂತ್ರಿಕತೆ ಬೇಕು, ಮೊಬೈಲು ಕೂಡ, ಆದರೆ ಅದಕ್ಕೆ ದಾಸರಾಗುವುದು ಬೇಡ. ಹೆಣ್ಣು ಮಕ್ಕಳು ಮೊದಲು ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ, ನಿಮ್ಮ ಬಗ್ಗೆ ನಿಮಗೆ ಕೀಳರಿಮೆ ಬರಬಾರದು. ಮನೆಯಲ್ಲಿರುವ ಮಕ್ಕಳಲ್ಲಿ ತಾರತಮ್ಯ ಮಾಡಬೇಡಿ, 1 ರಿಂದ 6ನೇ ವಯಸ್ಸಿನ ಮಕ್ಕಳನ್ನು ಪ್ರೀತಿಯಿಂದ ಸಾಕಿ, 6 ರಿಂದ 16ರ ತನಕ ತಪ್ಪು ಮಾಡಿದಾಗ ದಂಡಿಸಿ ಬೆಳೆಸಿ, 16ರ ನಂತರ ಸ್ನೇಹಿತರಂತೆ ಬೆಳೆಸಿ ಎಂದು ಸಲಹೆ ನೀಡಿದರು.

ಮಕ್ಕಳು ಗಳಿಸುವ ಅಂಕಗಳು ಮುಖ್ಯವಲ್ಲ. ಗುಣಾತ್ಮಕ ಶಿಕ್ಷಣ ಪಡೆಯುವಂತಾಗಬೇಕು. ಎಲ್ಲರೂ ಕೂಡ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಿ. ಖಾಸಗಿ ಶಾಲೆಯಲ್ಲಿ ಓದಿಸಬೇಕೆಂಬ ಹಂಬಲವುಳ್ಳವರು ಅದೇ ಹಣವನ್ನು ನಿಮ್ಮ ಮಗುವಿನ ಹೆಸರಲ್ಲಿ ಡೆಪಾಸಿಟ್ ಮಾಡಿ. ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಬಾಳಲ್ಲೂ ಮಕ್ಕಳನ್ನು ಜತೆಯಲ್ಲಿಟ್ಟುಕೊಂಡು ಓದಿಸಿ. ಸರ್ಕಾರಿ ಶಾಲೆಯಲ್ಲಿ ಓದಿಸಿದರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕಿಯರಿಗೆ ಗಾಯನ ಸೇರಿ ಇತರೆ ಸ್ಪರ್ಧೆಗಳನ್ನು ನಡೆಸಿ, ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಮಹಿಳಾ ಮತ್ತು ಅಂಗನವಾಡಿಗಳ ಮೇಲ್ವಿಚಾರಕಿ ಡಿ.ಎಂ.ರತ್ನಮ್ಮ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಜಯಭಾರತಿ, ಉಪಾಧ್ಯಕ್ಷೆ ಅಪ್ಸರ, ಸಂಘಟನಾ ಕಾರ್ಯದರ್ಶಿ ವಹೀದಾ ಭಾನು, ಪದಾಧಿಕಾರಿ ಪ್ರೇಮಾವತಿ, ಬಡ್ತಿ ಮುಖ್ಯ ಶಿಕ್ಷಕಿರಾದ ಸುಬ್ಬಲಕ್ಷ್ಮಮ್ಮ, ಉಮಾವತಿ, ನಳಿನಿ, ರಾಧ, ಶಿಕ್ಷಕಿಯರಾದ ಬಿ.ಸಿ.ಮಂಜುಳ, ನಾರಾಯಣಮ್ಮ. ಕೆ.ಎನ್.ವಿಜಯಾ, ಪ್ರಮೀಳ, ಹೇಮಾವತಿ ಸೇರಿ ತಾಲೂಕಿನ ಎಲ್ಲಾ ಮಹಿಳಾ ಶಿಕ್ಷಕಿಯರು ಇದ್ದರು.