ಕೊಡಗು ಜಿಲ್ಲಾಡಳಿತ, ಜಿಪಂ, ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ 2025-26 ನೇ ಸಾಲಿನ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಗುರುವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪೌಢಶಾಲಾ ವಿಭಾಗದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾಡಳಿತ, ಜಿಪಂ, ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ 2025-26 ನೇ ಸಾಲಿನ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಗುರುವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪೌಢಶಾಲಾ ವಿಭಾಗದಲ್ಲಿ ನಡೆಯಿತು.ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಉದ್ಘಾಟಿಸಿ ಮಾತನಾಡಿ, ಜ. 24ರಂದು ಹೆಣ್ಣು ಮಕ್ಕಳ ದಿನ ಆಚರಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸಿಗಬೇಕಾದಂತಹ ಗೌರವ, ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಹಾಗಾಗಿ ಇಂತಹ ದಿನಾಚರಣೆ ಮಾಡುವುದರ ಮೂಲಕ ಜನರಿಗೆ ಹೆಣ್ಣು ಮಕ್ಕಳ ಮಹತ್ವ ಮತ್ತು ಪ್ರಾಮುಖ್ಯತೆ ತಿಳಿಯಲಿ ಎಂಬುದಕ್ಕಾಗಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ದಿನಾಚರಣೆಗಳು ಆಚರಣೆಗೆ ಬಂದಿತು ಎಂದರು. ಪ್ರತಿಯೊಬ್ಬರೂ ತಮ್ಮ ಆಲೋಚನೆ ಬದಲಾಯಿಸಿಕೊಳ್ಳಬೇಕು. ಕೀಳರಿಮೆ ಎಂಬ ಹಿಂಜರಿಕೆಯನ್ನು ಹೋಗಲಾಡಿಸಿ ಎಲ್ಲ ಹೆಣ್ಣು ಮಕ್ಕಳು ಧೈರ್ಯದಿಂದ ತಮ್ಮ ಗುರಿ ತಲುಪಲು ಪ್ರಯತ್ನಿಸಬೇಕು ಎಂದರು. ಸಿಕ್ಕಿದ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಂಡು, ಮೊಬೈಲ್ ದೂರವಿಟ್ಟು, ಪುಸ್ತಕದ ಕಡೆ ಗಮನಹರಿಸಿ, ಮೊಬೈಲ್ ದುರ್ಬಳಕೆಯಿಂದ ತಲೆ ತಗ್ಗಿ ನಡೆಯಬೇಕಾಗಬಹುದು. ಆದರೆ ಪುಸ್ತಕದ ಅರಿವಿನಿಂದ ತಲೆ ಎತ್ತಿ ನಡೆಯಬಹುದು ಎಂದರು. ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನಕುಮಾರ್ ಮಾತನಾಡಿ, ಈಗ ಇರುವಂತಹ ಸಮಯವನ್ನು ಬಳಸಿಕೊಂಡು ತಮ್ಮ ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಿ. ಓದಿನ ಕಡೆ ಗಮನ ಹರಿಸಿದರೆ ಮುಂದೆ ಉತ್ತಮ ಪ್ರಜೆಗಳಾಗಬಹುದು ಎಂದರು. ಕೊಡಗು ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಪ್ರತಿಯೊಂದು ಹೆಣ್ಣು ಮಗುವು ಶಿಕ್ಷಣ ಪಡೆದು, ತಮ್ಮ ಗುರಿ ತಲುಪಬೇಕು. ಯಾವುದೇ ತೊಂದರೆಗೊಳದಾಗ ತುರ್ತು ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿಗೆ ಅಥವಾ ತುರ್ತು ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದರು. ಮಕ್ಕಳಿಗೆ ರಸಪ್ರಶ್ನೆ ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಶಿನಿ ಸ್ವಾಗತಿಸಿದರು. ಕಾನೂನು ಸೇವಾ ಪ್ರಾಧಿಕಾರದ ಜೋಯಪ್ಪ ನಿರೂಪಿಸಿ, ವಂದಿಸಿದರು. ಮಡಿಕೇರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶಶಿಕಲಾ, ಕೊಡಗು ಜಿಲ್ಲಾ ವಿಶೇಷ ಮಕ್ಕಳ ಘಟಕದ ಸಿಬ್ಬಂದಿ ಸತ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಿಬ್ಬಂದಿಗಳು, ಅಕ್ಕಪಡೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.