ಗೀತೆ ಎಲ್ಲ ವೇದ, ಉಪನಿಷತ್‌ಗಳ ಸಾರ: ಆರೀಫ್ ಖಾನ್

| Published : Sep 02 2024, 02:00 AM IST

ಸಾರಾಂಶ

ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಆಯೋಜಿಸಲಾದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವದ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಮಗೆ ಲಭಿಸಿರುವ ಸಂಪತ್ತನ್ನು ಬೇರೆಯವರೊಂದಿಗೆ ಹಂಚಿಕೊಳ್ಳದೆ ಅನುಭವಿಸುವುದು ಬೇರೆಯವರ ಸಂಪತನ್ನು ಕದ್ದಷ್ಟೇ ಅನೈತಿಕವಾದುದು ಎಂದು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಇದು ಭಗವದ್ಗೀತೆಯ ಅತ್ಯುತ್ತಮ ಸಂದೇಶವಾಗಿದೆ ಎಂದು ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಗವದ್ಗೀತೆ ಎಲ್ಲ ವೇದಗಳ ಮತ್ತು ಉಪನಿಷತ್‌ಗಳ ಸಾರವಾಗಿದೆ. ಅದರ ಅಧ್ಯಯನದಿಂದ ಭಾರತೀಯ ಎಲ್ಲ ಸಾಹಿತ್ಯದ ಅಧ್ಯಯನದ ಲಾಭ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಪುತ್ತಿಗೆ ಶ್ರೀಗಳ ಕೋಟಿ ಗೀತಾ ಯಜ್ಞ ಶ್ಲಾಘನೀಯ ಎಂದವರು ಹೇಳಿದರು.

ಗೀತೆಯ ಶ್ಲೋಕಗಳನ್ನು ನಿರ್ಗರಳವಾಗಿ ಉದ್ದರಿಸಿದ ಆರೀಫ್ ಮೊಹಮ್ಮದ್ ಖಾನ್ ಅವರು, ನಾವು ಯಾವ ಧರ್ಮದಲ್ಲಿ ಹುಟ್ಟಬೇಕು ಎಂಬುದು ದೇವರ ನಿರ್ಧಾರ, ಆದರೆ ಈ ಭೂಮಿಯಲ್ಲಿ ಹುಟ್ಟಿದ ಮೇಲೆ ನಮ್ಮ ಕರ್ತವ್ಯಗಳನ್ನು ಮಾಡುವುದಷ್ಟೇ ನಮ್ಮ ಕೆಲಸ, ಇದನ್ನೇ ಕೃಷ್ಣ ಗೀತೆಯಲ್ಲಿ ಪುರುಷಾರ್ಥ ಎಂದು ಹೇಳಿದ್ದಾನೆ. ಆದ್ದರಿಂದ ನಮ್ಮ ಗಳಿಕೆಯಲ್ಲಿ ಸ್ವಲ್ಪವನ್ನು ಬಡವರಿಗೆ, ಅನಾಥರಿಗೆ, ಅಸಹಾಯಕರಿಗೆ, ತುಳಿತಕ್ಕೊಳಗಾದವರಿಗೆ ನೀಡೋಣ ಎಂದರು.

ರಾಜ್ಯಪಾಲರನ್ನು ಗೌರವಿಸಿದ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಸಂಸ್ಕೃತ ಎಲ್ಲ ಭಾಷೆಗಳ ತಾಯಿ, ಉಳಿದೆಲ್ಲಾ ಭಾಷೆಗಳು ಪ್ರಾದೇಶಿಕ ಭಾಷೆಗಳು. ಆದರೇ ಸಂಸ್ಕೃತ ವಿಶ್ವಭಾಷೆಯೂ ಹೌದು, ದೇವಭಾಷೆಯೂ ಹೌದು, ಪರಲೋಕದ ಭಾಷೆಯೂ ಹೌದು ಎಂದರು.ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯವಹಿಸಿದ್ದರು. ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ, ವಿದಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ಪ್ರಮೋದ್ ಉಪಸ್ಥಿತರಿದ್ದರು. ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು, ವಿದ್ವಾನ್ ರಘೋತ್ತಮ ಆಚಾರ್ಯರು ರಾಜ್ಯಪಾಲರನ್ನು, ಗಣ್ಯರನ್ನು ಸ್ವಾಗತಿಸಿದರು.