ಸಾರಾಂಶ
ಪ್ರೋತ್ಸಾಹಧನ ₹15 ಸಾವಿರ ನಿಗದಿಯಾಗಬೇಕು. ನಿಗದಿಯಾಗದ ಅನ್ಯ ಕೆಲಸಗಳನ್ನು ಆಶಾಗಳಿಗೆ ನೀಡಬಾರದು.
ಹೊಸಪೇಟೆ: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ(ಎಐಯುಟಿಯುಸಿ) ಸಂಘದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಡಿಎಚ್‌ಒ ಡಾ. ಎಲ್.ಆರ್. ಶಂಕರ್ ನಾಯ್ಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತೆಯರಿಗೆ ದುಡಿದಷ್ಟು ಪ್ರೋತ್ಸಾಹಧನ ಸಂಪೂರ್ಣವಾಗಿ ದೊರೆಯಬೇಕು, ಆರ್‌ಸಿಎಚ್ ಪೋರ್ಟಲ್‌ನ ಗೊಂದಲಗಳಿಗೆ ಕೊನೆಹಾಕಬೇಕು, ಪ್ರೋತ್ಸಾಹಧನ ₹15 ಸಾವಿರ ನಿಗದಿಯಾಗಬೇಕು. ನಿಗದಿಯಾಗದ ಅನ್ಯ ಕೆಲಸಗಳನ್ನು ಆಶಾಗಳಿಗೆ ನೀಡಬಾರದು. ಅನಗತ್ಯ ಸರ್ವೆ ಹಾಗೂ ಕಾರ್ಯಕ್ರಮಗಳಲ್ಲಿ ತೊಡಗಿಸಬಾರದು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಪ್ರಮೋದ್ ಎನ್. ಮಾತನಾಡಿ, ಹಗಲಿರುಳು, ಜನಗಳ ಆರೋಗ್ಯಕ್ಕಾಗಿ ದುಡಿಯುತ್ತಿರುವ ಆಶಾಗಳನ್ನು ಸರ್ಕಾರಗಳು ಅತ್ಯಂತ ನಿರ್ಲಕ್ಷ್ಯದಿಂದ ಕಾಣುತ್ತಿವೆ. ಕೊರೋನಾ ಸಂದರ್ಭದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ದುಡಿದ ಆಶಾಗಳಿಗೆ ಸರ್ಕಾರಗಳು ನೀಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಂಕರ್ ನಾಯ್ಕ ಮಾತನಾಡಿ, ಆಶಾಗಳ ಸಮಸ್ಯೆಗಳ ಕುರಿತು ಚರ್ಚಿಸಲು, ಕೂಡಲೇ ವಿವಿಧ ಅಧಿಕಾರಿಗಳ, ವೈದ್ಯಾಧಿಕಾರಿಗಳ ಹಾಗೂ ಆಶಾ ಸಂಘದ ಮುಖಂಡರ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಇದಲ್ಲದೆ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಕೂಡ ಸಲ್ಲಿಸಲಾಯಿತು.ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ. ದೇವದಾಸ್ ಮಾತನಾಡಿದರು. ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿ ಗೌರಮ್ಮ ಕೆ.ಎಸ್. ವಹಿಸಿದ್ದರು. ಮುಖಂಡರಾದ ಗೀತಾ, ವೀರಮ್ಮ, ಮಂಗಳಾ, ಮಹೇಶ್ವರಿ, ಅನ್ನಪೂರ್ಣ ಮತ್ತಿತರರಿದ್ದರು.