ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಸಮಾಜದಲ್ಲಿ ಎಲ್ಲಾ ಸಮುದಾಯದವರೊಂದಿಗೆ ಸ್ನೇಹ, ವಿಶ್ವಾಸದಿಂದ ಜೀವನ ನಡೆಸುತ್ತಿರುವ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಬಲಿಜ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಸರ್ಕಾರ ಮೀಸಲಾತಿ ಸರಿಪಡಿಸಬೇಕಾಗಿದೆ ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಹಾಗೂ ಆಡಿಟರ್ ಟಿ.ಆರ್. ಅಂಜಿನಪ್ಪ ತಿಳಿಸಿದರು.ಪಟ್ಟಣದ ಕಾಮಧೇನು ಹೋಟೆಲ್ ಸಭಾಂಗಣದಲ್ಲಿ ತಾಲೂಕು ಬಲಿಜಸಂಘ ಏರ್ಪಡಿಸಿದ್ದ ಶ್ರೀ ಕೃಷ್ಣದೇವರಾಯ ಹಾಗೂ ಶಿಕ್ಷಣ ಜ್ಯೋತಿ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯುತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಬಲಿಜ ಸಮಾಜ ಸರ್ಕಾರದ ಎಲ್ಲಾ ಸವಲಿತ್ತುಗಳಿಂದ ವಂಚಿತವಾಗಿದ್ದು ಸಮಾಜದಲ್ಲಿ ತನ್ನದೇ ಅಧ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಳ್ಳೂವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಾಧನೆ ಮಾಡಿದ ಸಮುದಾಯದ ಬಾಂಧವರಿಗೆ ಅಭಿನಂದನೆಗಳು ಎಂದ ಅವರು ಸರ್ಕಾರ ಬಲಿಜ ಸಮುದಾಯಕ್ಕೆ ಆನ್ಯಾಯವಾಗಿರುವುದನ್ನು ಮನಗೊಂಡು 2ಎ ಮೀಸಲಾತಿ ನೀಡುವ ಮೂಲಕ ಸಮುದಾಯಕ್ಕೆ ನ್ಯಾಯ ವದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಪುರುಷೋತ್ತಮ್ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗದ ಬಲಿಜ ಸಮುದಾಯ ಕಳೆದ 40 ವರ್ಷಗಳ ಹಿಂದೆ 2ಎ ಮೀಸಲಾತಿಯಲ್ಲಿದ್ದು ತದನಂತರ ಅವೈಜ್ಞಾನಿಕವಾಗಿ ಸರ್ಕಾರ ಯಾವುದೇ ಸೂಚನೆ ಇಲ್ಲದೆ 2ಎ ಯಿಂದ 3ಎ ಗೆ ವರ್ಗಾಯಿಸಿ ಸಮುದಾಯಕ್ಕೆ ಅನ್ಯಾಯಮಾಡಿದೆ. ಇದರಿಂದ ಸರ್ಕಾರದ ಯೋಜನೆಗಳನ್ನು ಹಾಗೂ ಸವಲತ್ತುಗಳನ್ನು ಪಡೆಯಲು ವಿಫಲವಾಗಿದ್ದು, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅನ್ಯಾಯವಾಗಿದೆ. ಇದನ್ನು ಹೋರಾಟದ ಮೂಲಕ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಸಮುದಾಯದ ಮುಖಂಡರಲ್ಲಿ ಒತ್ತಾಯಿಸಿದರು.
ತಾಲೂಕು ಬಲಿಜ ಮಹಿಳಾ ಸಂಘದ ಗೌರವಾಧ್ಯಕ್ಷೆ ಮಂಜುಳಾ ಗೋವಿಂದರಾಜು, ಕೃಷ್ಣದೇವರಾಯರ ಸಾಧನೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಬಗ್ಗೆ ವಿವರಿಸಿದರು. ಜಿಲ್ಲಾ ಬಲಿಜ ಸಂಘದ ಜಂಟಿ ಕಾರ್ಯದರ್ಶಿ ಜಯಣ್ಣ, ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್. ಪದ್ಮನಾಭ್, ಜಿಲ್ಲಾ ಸಂಘದ ಪ್ರತಿನಿಧಿ ಕೆ.ಎಲ್. ಆನಂದ್, ಹಿರಿಯ ಮುಖಂಡ ಅಲ್ಪನಹಳ್ಳಿ ದೊಡ್ಡವೆಂಕಟಪ್ಪ ಮಾತನಾಡಿದರು.ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವ ಸಮರ್ಪಣೆ; ಫ್ರೆಂಡ್ಸ್ ಗ್ರೂಪ್ ಸಮತಿಯನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಉತ್ತಮ ಸೇವೆಮಾಡಿ ಜನ ಮನ್ನಣೆ ಪಡೆದ ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಪ್ರತಿಕಾ ರಂಗದಲ್ಲಿ ಉತ್ತಮ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಕೆ.ವಿ. ಪುರುಷೋತ್ತಮ್, ರಾಜಕೀಯವಾಗಿ ಸೇವೆಮಾಡಿ ಹೊಳವನಹಳ್ಳಿ ಗ್ರಾ.ಪಂ. ಸದಸ್ಯ ಹಾಗೂ ವಿಎಸ್‌ಎಸ್‌ಎನ್ ಅಧ್ಯಕ್ಷ ಕುಂಬಿನರಸಿಂಹಯ್ಯ(ಅಪ್ಪಿ) ಹಾಗೂ ದೊಡ್ಡಸಾಗ್ಗೆರೆ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿದೇವಮ್ಮ ಅಶ್ವತ್ಥನಾರಾಯಣ್ ಅವರನ್ನು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್. ಅಂಜಿನಪ್ಪ ಗೌರವಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕೆ.ಬಿ. ಲೋಕೇಶ್, ಪ್ರದೀಪ್ ಕುಮಾರ್, ಕರಕಲಘಟ್ಟ ಜಯರಾಮಯ್ಯ, ಕೇಶವಮೂರ್ತಿ, ನಂಜುಂಡಯ್ಯ, ಶಿವಶಂಕರ್, ಶ್ರೀನಿವಾಸ್, ಮಂಜುನಾಥ್, ಕಾಲೋನಿ ನರಸಿಂಹಮೂರ್ತಿ, ವೆಂಕಟೇಶ್, ಲಕ್ಷ್ಮಿನರಸಮ್ಮ, ಜಗದಾಂಬ, ಮಮತಾ. ಸುಚಿತ್ರಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.