ಕನ್ನಡ ಸಾಹಿತ್ಯ ಸಮ್ಮೇಳನದ ವಿವರಣಾತ್ಮಕ ಲೆಕ್ಕ ಕೊಡಿ: ಎಂ.ಬಿ.ನಾಗಣ್ಣಗೌಡ

| Published : Apr 24 2025, 11:49 PM IST

ಸಾರಾಂಶ

ಪಾರದರ್ಶಕ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಇದು ಪೂರಕವಾದ ಕ್ರಮವಾಗಿದ್ದು, ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕ್ರಿಯೆಯಾಗಿದೆ. ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿದ ಕುರಿತು ಕೋಶಾಧಿಕಾರಿಗಳು ಉತ್ತರದಾಯಿಗಳಾಗಿದ್ದು, ಅವರು ನಮ್ಮ ಆಗ್ರಹಗಳಿಗೆ ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆಯ-ವ್ಯಯಗಳ ವಿವರಣಾತ್ಮಕ ಅನುದಾನ ಮತ್ತು ಖರ್ಚುಗಳನ್ನು ಉಲ್ಲೇಖಿಸಿದ ಲೆಕ್ಕಪತ್ರಗಳನ್ನು ಬಿಡುಗಡೆಗೊಳಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ. ನಾಗಣ್ಣಗೌಡ ಒತ್ತಾಯಿಸಿದರು.

ಪಾರದರ್ಶಕತೆಯ ದೃಷ್ಟಿಯಿಂದ ಸಮ್ಮೇಳನದ ಖರ್ಚು-ವೆಚ್ಚಗಳನ್ನು ಸಂಪೂರ್ಣವಾಗಿ ಸಾರ್ವಜನಿಕಗೊಳಿಸುವಂತೆ ಎಂಬ ಬೇಡಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿಡುತ್ತಲೇ ಬಂದಿದ್ದೇವೆ. ಆದರೆ, ಆಯ-ವ್ಯಯ ಲೆಕ್ಕಪತ್ರ ವರದಿಯನ್ನು ಈಚೆಗೆ ಬಿಡುಗಡೆ ಮಾಡಿದೆ. ಆದರೆ, ವಿವರಣಾತ್ಮಕ ಲೆಕ್ಕಪತ್ರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಸಮ್ಮೇಳನದ ಖರ್ಚುಗಳ ಪಾರದರ್ಶಕತೆಯನ್ನು ತೋರುವುದರ ಜೊತೆಗೆ ಆಗಿರಬಹುದಾದ ಲೋಪದೋಷಗಳ ಪತ್ತೆಗೆ ಸಹಕಾರಿಯಾಗುತ್ತದೆ. ಈಗಾಗಲೇ ಬಿಡುಗಡೆಗೊಳಿಸಿರುವ ವರದಿಯಲ್ಲಿ ಹಲವು ಬಗೆಯ ದುಂದು ವೆಚ್ಚಗಳು ಕಾಣಿಸುತ್ತಿವೆ. ಹಾಗಾಗಿ ಸಮ್ಮೇಳನದ ಕೋಶಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಅಧಿಕೃತ ವಿವರಣಾತ್ಮಕ ಲೆಕ್ಕಪತ್ರಗಳ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಒತ್ತಾಯಿಸಿದರು.

ಪಾರದರ್ಶಕ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಇದು ಪೂರಕವಾದ ಕ್ರಮವಾಗಿದ್ದು, ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕ್ರಿಯೆಯಾಗಿದೆ. ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿದ ಕುರಿತು ಕೋಶಾಧಿಕಾರಿಗಳು ಉತ್ತರದಾಯಿಗಳಾಗಿದ್ದು, ಅವರು ನಮ್ಮ ಆಗ್ರಹಗಳಿಗೆ ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಕಸಾಪ ಕೇಂದ್ರ ಸಮಿತಿ ತಾನು ಬಳಸಿದ ಎರಡೂವರೆ ಕೋಟಿ ರು.ಹಣದ ಕುರಿತು ಜಂಟಿಯಾಗಿ ಲೆಕ್ಕಪತ್ರ ಮಂಡಿಸಬೇಕಿತ್ತು. ಈ ಕುರಿತು ಕೋಶಾಧಿಕಾರಿಗಳು ಲೆಕ್ಕ ಪತ್ರ ಮಂಡಿಸುವಂತೆ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಿಗೆ ಸೂಚಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಸರ್ವಾಧಿಕಾರಿಗಳಲ್ಲ ಎಂಬುದನ್ನು ಕಸಾಪ ರಾಜ್ಯಾಧ್ಯಕ್ಷರು ಅರಿತು ಲೆಕ್ಕಪತ್ರ ಮಂಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ರಾಜೇಂದ್ರಸಿಂಗ್‌ಬಾಬು, ಅರವಿಂದಪ್ರಭು, ಸಂತೋಷ್, ರಾಜೇಂದ್ರ ಇತರರು ಗೋಷ್ಠಿಯಲ್ಲಿದ್ದರು.