ಸಾರಾಂಶ
ಕನಕಪುರ: ನಗರದ ಮಳಗಾಳು ವಾರ್ಡ್‌ನಲ್ಲಿ ಕಳೆದ ಹತ್ತು ದಿನಗಳ ಹಿಂದೆ ದಲಿತ ಯುವಕನ ಮೇಲೆ ನಡೆದ ಹಲ್ಲೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾಜಿ ಶಾಸಕ ಕೆ.ಅನ್ನದಾನಿ, ಗಾಯಾಳು ಲಕ್ಷ್ಮಣ್ ಹಾಗೂ ಸಂತ್ರಸ್ತ ಅನೀಶ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಕನಕಪುರದ ಶಾಸಕರು ರಾಜ್ಯ ಆಳುತ್ತಿದ್ದಾರೆ. ರೌಡಿ ಶೀಟರ್ ಹರ್ಷ ಆಲಿಯಾಸ್ ಕೈಮಾ ದಲಿತ ಯುವಕನ ಕೈ ಕತ್ತರಿಸಿ ಕ್ರೌರ್ಯ ಮೆರೆದಿದ್ದರೂ ಪೊಲೀಸ್ ಇಲಾಖೆ ಮೌನ ವಹಿಸಿದೆ. ಮಳಗಾಳು ಕನಕಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮ. ಇಲ್ಲಿ ಎಲ್ಲಾ ಜನಾಂಗದವರು ಸಾಮರಸ್ಯದಿಂದ ಬದುಕಬೇಕಾಗಿದೆ. ಆದರೆ ಕಾರಣಗಳಿಲ್ಲದೆ ದಲಿತರ ಮೇಲೆ ದೌರ್ಜನ್ಯವೆಸಗುವುದು ಸರಿಯ ಎಂದು ಹೇಳಿದರು.ಇಲ್ಲಿ ಜಾತಿಗಿಂತ ಹೆಚ್ಚಾಗಿ ಮಾನವೀಯತೆಯೇ ಮುಖ್ಯ. ನಾವೆಲ್ಲರೂ ಸಾಮರಸ್ಯದಿಂದ ಬದುಕಬೇಕಾಗಿದೆ. ಸಮಾಜದಲ್ಲಿ ದನಿ ಇಲ್ಲದವರಿಗೆ ಇಷ್ಟೊಂದು ದೌರ್ಜನ್ಯ ಮಾಡಿರುವುದು ಸರಿಯಲ್ಲ, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯ ಆಳುತ್ತಿದ್ದೀರಿ, ಉಪಮುಖ್ಯಮಂತ್ರಿಗಳಾಗಿದ್ದೀರಿ, ಕನಕಪುರ ತಾಲೂಕಿನಲ್ಲಿ ಏಳು ಬಾರಿ ಗೆದ್ದಿದ್ದೀರಿ, ಈ ಮಳಗಾಳು ಗ್ರಾಮದ ಮೊಮ್ಮಗರಾಗಿದ್ದೀರಿ, ಆದರೆ ನೀವು ಹುಟ್ಟಿರುವಂತಹ ಗ್ರಾಮದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದರೆ, ದಲಿತರ ಮೇಲೆ ನಿಮಗೆ ಎಷ್ಟು ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ ಎಂದು ಕುಹಕವಾಡಿದರು.
ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ದಲಿತರ ಮೇಲೆ ಇಂತಹ ದೌರ್ಜನ್ಯಗಳು ನಡೆಯುತ್ತಿದೆ ಎಂದರೆ, ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬುದು ಅನುಮಾನ ಬರುತ್ತಿದೆ. ಜೆಡಿಎಸ್ ರಾಜ್ಯ ಎಸ್ಸಿ,ಎಸ್ಟಿ ರಾಜ್ಯಾಧ್ಯಕ್ಷನಾಗಿ ಪ್ರಶ್ನೆ ಮಾಡುತ್ತಿದ್ದೇನೆ. ಮಳಗಾಳು ಗ್ರಾಮದಲ್ಲಿ ಈ ಹಿಂದೆ ಕೂಡ ಇಂತವೇ ಘಟನೆಗಳು ನಡೆದಿವೆ. ಗಡಿಪಾರಾದ ವ್ಯಕ್ತಿ ಮತ್ತೆ ಕನಕಪುರಕ್ಕೆ ಬಂದು ಈ ಕೃತ್ಯ ಎಸಗಲು ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ದೂರಿದರು.ಮಳಗಾಳು ಗ್ರಾಮದಲ್ಲಿ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ಎಸ್.ರವಿ ಕೂಡ ಗಮನಿಸಬೇಕು. ಶಾಂತಿ ಸಭೆ ನಡೆಸಿ ಎಲ್ಲ ಸಮುದಾಯಗಳಲ್ಲಿ ಸಹೋದರತ್ವ ಬೆಳೆಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಈ ರೀತಿ ಗೂಂಡಾಗಿರಿ, ಒಂದು ಸಮಾಜವನ್ನು ಮತ್ತೊಂದು ಸಮಾಜದ ಮೇಲೆ ಎತ್ತಿಕಟ್ಟುವ ಕೆಲಸ ಆಗಬಾರದು, ಕನಕಪುರದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ರಾಮನಗರ ಜಿಲ್ಲೆ ಪೊಲೀಸ್ ಅಧೀಕ್ಷಕರಿಗೆ ಅವರದೇ ಆದಂತಹ ಗುಪ್ತಚರ ಇಲಾಖೆ, ತಾಲೂಕು ಮಟ್ಟದಲ್ಲಿಯೂ ಆ ವ್ಯವಸ್ಥೆ ಇದ್ದೂ ದಲಿತರಿಗೆ ಅನ್ಯಾಯವಾಗಿದೆ ಎಂದರೆ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಜೀವನಪೂರ್ತಿ ಅಂಗವಿಕಲನಾಗಿದ್ದು, ಅ ವ್ಯಕ್ತಿಗೆ ಕೂಡಲೇ ಸರ್ಕಾರ ಉದ್ಯೋಗವನ್ನು ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಜೆಡಿಎಸ್ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ ನಾಗರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಪಿ.ಕುಮಾರ್, ಜೆಡಿಎಸ್ ಮುಖಂಡ ನಲ್ಲಹಳ್ಳಿ ಶಿವಕುಮಾರ್, ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ಸಿದ್ದ ಮರಿಗೌಡ, ಜೆಡಿಎಸ್ ಮಾಜಿ ನಗರಸಭಾ ಸದಸ್ಯ ಪುಟ್ಟರಾಜು ಹಾಜರಿದ್ದರು.ಫೋಟೋ: ಕೆ ಕೆ ಪಿ ಸುದ್ದಿ 03:
ಕನಕಪುರ ತಾಲೂಕಿನ ಮಳಗಾಳು ಗ್ರಾಮದ ದಲಿತ ಯುವಕ ಅನೀಶ್ ಮನೆಗೆ ಮಳವಳ್ಳಿ ಜೆಡಿಎಸ್ ಎಸ್ಸಿ/ಎಸ್ಟಿ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಅನ್ನದಾನಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.