ಸಾರಾಂಶ
ಉಡುಪಿ : ರಾಜ್ಯ ಕಾಂಗ್ರೆಸ್ ಸರ್ಕಾರ ಕರಾವಳಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇಂತಹ ಹೊಣೆಗೇಡಿ ಸರ್ಕಾರಕ್ಕೆ ಕರಾವಳಿಯ ಜನತೆ ವಿಧಾನ ಪರಿಷತ್ ಉಪಚುನಾವಣೆ ಮೂಲಕ ಕಠಿಣ ಸಂದೇಶ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.
ಅವರು ಮಂಗಳವಾರ ಉಡುಪಿ- ದ.ಕ. ಜಿಲ್ಲಾ ಸ್ಥಳಿಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಸ್ಥಳಿಯಾಡಳಿತ ಜನಪ್ರತಿನಿಧಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.ಸಿಎಂ ಸಿದ್ದರಾಮಯ್ಯ ಅವರಿಗಂತೂ ಕರಾವಳಿ ಎಂದರೇ ಅಲರ್ಜಿ.
ಇಲ್ಲಿನ ಉಸ್ತುವಾರಿ ಸಚಿವರನ್ನು ಬಿಟ್ಟರೆ ಬೇರೆ ಯಾವ ಸಚಿವರೂ ಕರಾವಳಿಗೆ ಬರುತ್ತಿಲ್ಲ, ಪ್ರಗತಿ ಪರಿಶೀಲನೆಯನ್ನೂ ಮಾಡುತ್ತಿಲ್ಲ. ಬಂದು ಏನು ಮಾಡುತ್ತಾರೆ ಬದನೆಕಾಯಿ, ಇಲ್ಲಿಗೆ 1 ರು. ಅನುದಾನ ನೀಡಿಲ್ಲ, ಇನ್ನು ಪ್ರಗತಿ ಎಲ್ಲಿಂದ ಬಂತು ಪರಿಶೀಲನೆ ಮಾಡುವುದಕ್ಕೆ ಎಂದವರು ಕಟುವಾಗಿ ಟೀಕಿಸಿದರು.ಈ ಸರ್ಕಾರಕ್ಕೆ ಬೆಂಗಳೂರು ಬಿಟ್ಟರೆ ಬೇರೆ ಜಿಲ್ಲೆಗಳಿಲ್ಲ.
ಕರಾವಳಿಯ ಶಾಸಕರು ಎಂತಹ ದುರಾದೃಷ್ಟವಂತರೆಂದರೆ ಅವರು ಶಾಸಕರಾಗಿ ಒಂದು ಮುಕ್ಕಾಲು ವರ್ಷ ಕಳೆದರೂ ಒಂದು ಅಭಿವೃದ್ಧಿ ಕೆಲಸಕ್ಕೆ ಅನುದಾನ ಬಂದಿಲ್ಲ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುತಿದ್ದರೆ ಒಬ್ಬೊಬ್ಬ ಶಾಸಕನಿಗೆ 2000 ಸಾವಿರ ಕೋಟಿ ರು. ಅನುದಾನ ಕೊಟ್ಟಿರುತ್ತಿದ್ದರು ಎಂದರು.
ದೇಶದಲ್ಲಿ ಇಷ್ಟು ಜನಪ್ರಿಯತೆ ಕಳೆದಕೊಂಡ ಏಕೈಕ ಸರ್ಕಾರ ಇದ್ದರೆ ಅದು ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದ ವಿಜಯೇಂದ್ರ, ವಾಲ್ಮೀಕಿ ಹಗರಣ ಆಯ್ತು, ಮುಡಾ ಹಗರಣ ಆಯ್ತು, ಸಿಎಂ ಕುರ್ಚಿ ಅಲ್ಲಾಡ್ತಿದೆ ಎಂದಾಗ ಸೈಟ್ ಹಿಂದಕ್ಕೆ ನೀಡಿದ್ದಾರೆ, ಮುಂದೆ ಕೆಂಪಯ್ಯ ಆಯೋಗದ 5000 ಕೋಟಿ ರು.ಗಳ ಹಗರಣ ಇದೆ, ಇದು ಹೊರಗೆ ಬಂದ್ರೆ ಸರ್ಕಾರ ತಾನಾಗಿಯೇ ಬೀಳುತ್ತದೆ ಎಂದು ಭವಿಷ್ಯ ನುಡಿದರು.* ಬಿಜೆಪಿಗೆ ದಾರಿದೀಪ
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕರ್ನಾಟಕದ ಉಪಚುವಾವಣೆಗಳ ಫಲಿತಾಂಶ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಾರಿದೀಪವಾಗುತ್ತವೆ ಎಂದರು.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್‌ನಲ್ಲಿಯೇ ಹೋರಾಟ ಆರಂಭವಾಗಿದೆ. ಸಿದ್ದರಾಮಯ್ಯ ಕೆಳಗಿಳಿಸಿದರೇ ಅವರು ಸರ್ಕಾರವನ್ನೇ ಬೀಳಿಸುತ್ತಾರೆ. ಜನತಾದಳವನ್ನು ಒಡೆದು ಬಂದವರು, ಕಾಂಗ್ರೆಸನ್ನು ಸುಮ್ಮನೇ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.
* 6ನೇ ಗ್ಯಾರಂಟಿ ಜಾರಿ
ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ್ ಮಾತನಾಡಿ, 5 ಗ್ಯಾರಂಟಿ ಎಂಬ ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತುಂಬಾ ದಿನ ಅಧಿಕಾರದಲ್ಲಿ ಉಳಿಯೋದಿಲ್ಲ ಎಂಬ 6ನೇ ಗ್ಯಾರಂಟಿ ಸದ್ಯದಲ್ಲೇ ಜಾರಿಗೆ ಬರೋದಿದೆ ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಕಾಂಗ್ರೆಸ್ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯ ಒಂದೊಂದು ಕಲ್ಲನ್ನು ಸಡಿಲ ಮಾಡುತ್ತಿದೆ ಎಂದು ಆರೋಪಿಸಿದರು.
ಕಳೆದ ಬಾರಿ ನಾನು 1600ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದೆ, ಈ ಬಾರಿಯೂ ಕಿಶೋರ್ ಕುಮಾರ್ ಅಷ್ಟು ಮತಗಳಿಂದ ಗೆಲ್ಲುವುದು ಈಗಾಗಲೇ ನಿಶ್ಚಿತ ಆಗಿದೆ ಎಂಬ ಭರವಸೆ ವ್ಯಕ್ತ ಪಡಿಸಿದರು.ಸಮಾವೇಶದಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಶಾಸಕರಾದ ಯಶ್ಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಹರೀಶ್ ಪೂಂಜ, ದ.ಕ. ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ವೇದಿಕೆಯಲ್ಲಿದ್ದರು.ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಕುಂದಾಪುರ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು.
ಗಟ್ಟಿದನಿಯಲ್ಲಿ ಮಾತನಾಡುತ್ತೇನೆ...
ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಮಾತಣಾಡಿ, ಮೇಲ್ಮನೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಬಡವರ ಪರ ಮಾತನಾಡುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರ ಗಟ್ಟಿಧ್ವನಿಗೆ ಕಿಂಚಿತ್ತು ಕೊರತೆಯಾಗದಂತೆ ಕೆಲಸ ಮಾಡುತ್ತೇನೆ ಎಂಬ ಭರವಸೆಯೊಂದಿಗೆ ಮತಯಾಚಿಸಿದರು.