ಸಾರಾಂಶ
ಶಿಕಾರಿಪುರ: ಹಲವು ವರ್ಷಗಳಿಂದ ಬಾಕಿ ಇರುವ ಇ ಸ್ವತ್ತಿನ ಸಮಸ್ಯೆಗೆ ಸರ್ಕಾರವು ನೀಡಿರುವ ಮಾರ್ಗದರ್ಶಿ ಅನ್ವಯ ಜನರಿಗೆ ತೊಂದರೆ ಆಗದಂತೆ ಎ ಮತ್ತು ಬಿ ಖಾತೆಗಳನ್ನು ನೀಡಬೇಕು ಎಂದು ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭಾ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಮಾತನಾಡಿದರು.ದಶಕಗಳಿಂದ ಇರುವ ಸಮಸ್ಯೆಗೆ ಒಂದು ದಾರಿ ದೊರೆತಿದೆ. ಜನರನ್ನು ಕಚೇರಿಗೆ ಅಲೆದಾಡಿಸದೆ, 2004 ರಿಂದ ಈಚೆಗೆ ಇಸಿ ಪಡೆದು, ಅನಗತ್ಯ ದಾಖಲೆಗಳನ್ನು ಕೇಳದೆ ಪುರಸಭೆಯಲ್ಲಿ 8 -10 ಕೌಂಟರ್‌ಗಳನ್ನು ತೆರೆದು, ಅವಶ್ಯವಿದ್ದಲ್ಲಿ ಹೆಚ್ಚುವರಿ ಡಾಟಾ ಆಪರೇಟರ್‌ಗಳನ್ನು, ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡಿಕೊಳ್ಳಿ, ಹೊರ ಭಾಗದಲ್ಲಿ ಶಾಮಿಯಾನ ಹಾಕಿ ಜನ ಕೂರಲು ಕುರ್ಚಿ, ಬಂದವರಿಗೆ ಟೀ, ಕಾಫಿ ವ್ಯವಸ್ಥೆಯನ್ನು ಕಲ್ಪಿಸಿ, ಶೀಘ್ರವಾಗಿ ಇ ಸ್ವತ್ತನ್ನು ತಲುಪಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಬೇಕು ಎಂದು ಸೂಚಿಸಿದರು.
ಇ ಸ್ವತ್ತು ಮಾಡಲು ಮೇ 10 ಕೊನೆಯ ದಿನಾಂಕವಾಗಿದ್ದು ಅಲ್ಲಿಯವರೆಗೂ ಕಾಯದೆ ಏಪ್ರಿಲ್ ಅಂತ್ಯದ ಒಳಗಾಗಿ ಎಲ್ಲರಿಗೂ ಇ ಸ್ವತ್ತನ್ನು ಕೊಡುವ ವ್ಯವಸ್ಥೆ ಮಾಡಿ ಎಂದು ಪುರಸಭಾ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು .ಪ್ರತಿಯೊಬ್ಬ ಪುರಸಭಾ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿ ಹಾಗೂ ಪುರಸಭಾ ವಾಹನಗಳಲ್ಲಿರುವ ಮೈಕ್ ಗಳನ್ನು ಉಪಯೋಗಿಸಿಕೊಂಡು ಈ ಕುರಿತು ಪ್ರಚಾರಪಡಿಸಿ ಎಂದರು.ಭೂ ಪರಿವರ್ತನೆಗೊಂಡು, ಪುರಸಭಾ ಮುಖ್ಯಾಧಿಕಾರಿ ಅನುಮೋದಿಸಿದ ನಕ್ಷೆ ಹೊಂದಿ, ಅಭಿವೃದ್ಧಿ ಶುಲ್ಕ ಪಾವತಿಸಿ ಕೊಂಡು ಖಾತೆ ದಾಖಲು ಮಾಡಿರುವ ನಿವೇಶನಗಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಇ ಸ್ವತ್ತನ್ನು ನೀಡಿದ್ದು, ಅಂತಹ ಪ್ರಕರಣಗಳಿಗೆ ಈಗ ಎ ಖಾತಾ ನೀಡಬೇಕೆಂದು ಪುರಸಭಾ ಸದಸ್ಯ ರೇಣುಕಾ ಸ್ವಾಮಿ ಸಭೆಗೆ ಮನವಿ ಮಾಡಿದರು.
ಈ ಕುರಿತು ಉತ್ತರಿಸಿದ ಮುಖ್ಯಾಧಿಕಾರಿ ಭರತ್, ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಸಲಹೆ ಪಡೆಯುವುದಾಗಿ ತಿಳಿಸಿದರು.ಪುರಸಭಾ ಸದಸ್ಯರ ಹಲವು ಪ್ರಶ್ನೆಗಳಿಗೆ ಉಪ ನೋಂದಣಾಧಿಕಾರಿ ದಿವ್ಯ ಹಾಗೂ ಪುರಸಭಾ ಮುಖ್ಯಾಧಿಕಾರಿ ಭರತ್ ಉತ್ತರಿಸಿದರು .
ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ದಿಶಾ ಸಮಿತಿಯ ಸದಸ್ಯ ಕೆ.ಎಸ್.ಗುರುಮೂರ್ತಿ, ಪುರಸಭಾ ಉಪಾಧ್ಯಕ್ಷ ರೂಪ ಪಾರಿವಾಳ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ (ಗುಂಡ ), ಜಿಪಂ ಮಾಜಿ ಸದಸ್ಯ ಕೆ.ಹಾಲಪ್ಪ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ ಸೇರಿದಂತೆ ಪುರಸಭಾ ಸದಸ್ಯರು ಹಾಜರಿದ್ದರು.