ಹೆಚ್ಚುವರಿ ಭತ್ಯೆ, ಆಧುನಿಕ ಯಂತ್ರೋಪಕರಣ ನೀಡಿ

| Published : Feb 14 2025, 12:32 AM IST

ಸಾರಾಂಶ

ಸರ್ಕಾರ ನೀಡಿದ ಭರವಸೆ ಈಡೇರಿಸದಿರುವ ಕ್ರಮ ಖಂಡಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳು 2ನೇ ಅವಧಿಯ ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕುಮಾರಿ ಪೂರ್ಣಿಮಾಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಆಲೂರು

ಸರ್ಕಾರ ನೀಡಿದ ಭರವಸೆ ಈಡೇರಿಸದಿರುವ ಕ್ರಮ ಖಂಡಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳು 2ನೇ ಅವಧಿಯ ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕುಮಾರಿ ಪೂರ್ಣಿಮಾಗೆ ಮನವಿ ಸಲ್ಲಿಸಿದರು. ಗ್ರಾಮ ಆಡಳಿತಾಧಿಕಾರಿ ಜೆ.ರವಿನಾಯ್ಕ ಮಾತನಾಡಿ, ರಾಜ್ಯ ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಹೆಚ್ಚೆಚ್ಚು ಸಾರ್ವಜನಿಕ ಸೇವೆಯನ್ನು ನಿರ್ವಹಿಸುವ ಜವಾಬ್ದಾರಿ ವಹಿಸಿದ್ದು ಹೆಚ್ಚುವರಿ ಕೆಲಸ ನಿರ್ವಹಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ ಹೆಚ್ಚುವರಿ ಭತ್ಯೆ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ನೀಡಬೇಕು. ನಮೂನೆ 1-5 ದುರಸ್ತಿ, ಇ.ಆಫೀಸ್, ಪಹಣಿಗೆ ಆಧಾರ್ ಜೋಡಣೆ, ಲ್ಯಾಂಡ್ ಬಿಟ್ ಆಫ್ ಸಂಯೋಜನೆ, ನವೋದಯ, ಗರುಡ ಆಪ್, ಇ.ಜನ್ಮ ತಂತ್ರಾಂಶಗಳ ಮೂಲಕ ಪೊಗರು ಹಕ್ಕು ಪತ್ರ, ಪಿಎಂ ಕಿಸಾನ್ ವೆಬ್ ಆಪ್, ಬೆಳೆ ಸಂರಕ್ಷಣೆ, ಬೆಳೆಕಟಾವು, ಬೆಳೆ ಸಮೀಕ್ಷೆ, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ, ಸಿ.ವಿಜಯ್ ಇನ್ನೂ ಹತ್ತು ಹಲವು ಕೆಲಸಗಳನ್ನು ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಕೆಲಸ ನಿರ್ವಹಿಸಬೇಕಾಗಿದೆ ಎಂದರು. ಸದರಿ ಕೆಲಸ ನಿರ್ವಹಿಸಲು ಯಾವುದೇ ಮೂಲಭೂತ ಸೌಕರ್ಯ ನೀಡದಿರುವುದರಿಂದ ಪ್ರಗತಿ ಹಿನ್ನೆಡೆಗೆ ಕಾರಣವಾಗಿದೆ. ಆದರೆ ಇವ್ಯಾವುದೇ ಮೂಲಭೂತ ಸೌಕರ್ಯಗಳನ್ನು ಸರ್ಕಾರ ನೀಡದೆ ಟಾರ್ಗೆಟ್ ರೀತಿಯಲ್ಲಿ ಕಾಲಮಿತಿ ಒಳಗಡೆ ಇವೆಲ್ಲ ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಒತ್ತಡ ಏರುತ್ತಿರುವುದರಿಂದ ಅಧಿಕಾರಿಗಳಿಗೆ ಮಾನಸಿಕ ಹಾಗೂ ದೈಹಿಕ ಒತ್ತಡಗಳು ಹೆಚ್ಚಾಗುತ್ತಿದ್ದು ಅವರ ಆರೋಗ್ಯದಲ್ಲಿ ಏರುಪೇರು ಆಗುವ ಪರಿಸ್ಥಿತಿ ಬಂದೊದಗಿದೆ. ಇದರಿಂದ ಹಲವಾರು ಗ್ರಾಮ ಆಡಳಿತ ಅಧಿಕಾರಿಗಳ ದಿಢೀರ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ ಅಭಿಷೇಕ್ ಮಾತನಾಡಿ, ಒಬ್ಬ ಆಡಳಿತಾಧಿಕಾರಿಗಳಿಗೆ ನಿಯಮ ಪ್ರಕಾರ ಒಂದು ವೃತ್ತದ ಜವಾಬ್ದಾರಿಯನ್ನು ವಹಿಸಬೇಕು. ಆದರೆ ನಮ್ಮ ಆಲೂರು ತಾಲೂಕಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮಂಜೂರಾತಿ ಹುದ್ದೆಯು 24 ಇದ್ದು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವವರು 19 ಜನ ಗ್ರಾಮ ಆಡಳಿತಾಧಿಕಾರಿಗಳಿದ್ದು ಅದರಲ್ಲಿ 4 ಜನ ಸಿಬ್ಬಂದಿಗಳನ್ನು ಕಚೇರಿ ಕೆಲಸಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿದ್ದು ಉಳಿದ 15 ಜನ ಗ್ರಾಮ ಆಡಳಿತ ಅಧಿಕಾರಿಗಳು 24 ಜನ ಸಿಬ್ಬಂದಿಗಳು ಮಾಡುವ ಕೆಲಸಗಳನ್ನು ಹೆಚ್ಚುವರಿಯಾಗಿ ವಹಿಸಿಕೊಂಡು ಮಾಡುತ್ತಿದೆ.

ಇದರ ಜೊತೆಗೆ ಇನ್ನೂ ಹೆಚ್ಚುವರಿಯಾಗಿ ಚುನಾವಣೆ ಕರ್ತವ್ಯಗಳು ಹಾಗೂ ಸರ್ಕಾರ ಹೊಸದಾಗಿ ಜಾರಿ ಮಾಡುವ ಕಾರ್ಯಕ್ರಮ ಅನುಷ್ಠಾನ ಮಾಡುವ ಹೊಣೆಗಾರಿಕೆವಹಿಸಲಾಗುತ್ತಿದೆ. ಇದರಿಂದ ನಮಗೆ ನಮ್ಮ ವ್ಯಾಪ್ತಿಯನ್ನ ಮೀರಿ ಕೆಲಸದ ಒತ್ತಡಗಳು ಹೆಚ್ಚಾಗುತ್ತಿದ್ದು, ನಾವು ರಜಾ ದಿನಗಳನ್ನು ಲೆಕ್ಕಿಸದೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆ. ರಜಾ ದಿನಗಳಲ್ಲೂ ಕೂಡ ನಾವು ನಮ್ಮ ಸಂಸಾರದ ಜೊತೆ ಕಾಲ ಕಳೆಯಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಿದೆ. ಸರ್ಕಾರವು ಕೂಡಲೇ ನಮ್ಮ ಬೇಡಿಕೆ ಈಡೇರಿಕೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಅಭಿಷೇಕ್,ಉಪಾಧ್ಯಕ್ಷ ಸಂಜೇವ್ ಚೌಹಣ್, ಕಾರ್ಯದರ್ಶಿ ದೇವೇಂದ್ರಪ್ಪ ಪೂಜಾರಿ ಖಜಾಂಚಿ ರಾಘವೇಂದ್ರ ಬಂಡಾರಿ, ಮಂಜಪ್ಪ, ನಾಗೇಶ್, ಸಿಬ್ಬಂದಿಗಳಾದ ಸಂತೋಷ್, ಗೀತಾ, ಅಮೂಲ್ಯ ,ಚಂದ್ರಶೇಖರ, ಹೇಮರಾಜು, ಬಸವರಾಜು, ಮನು, ರಂಗಸ್ವಾಮಿ, ಅಂಜುಮ್ ಖಿಲಾದರ್, ಪೂರ್ಣಿಮಾ, ನಿತ್ಯ, ಅಮೂಲ್ಯ ಉಪಸ್ಥಿತರಿದ್ದರು.