ನೇರವಂತಿಕೆ- ಹೃದಯವಂತಿಕೆಗೆ ಹೆಸರಾದ ಅಂಬರೀಶ್ ಚಿತ್ರರಂಗದಲ್ಲಿ ಹಲವು ಕಲಾವಿದರಿಗೆ ಅಪತ್ಭಾಂಧವನಾಗಿ ನೆರವಾಗಿದ್ದಾರೆ. ಯಾವುದೇ ಸಮಸ್ಯೆ ಎದುರಾದರೂ ಯಶಸ್ವಿಯಾಗಿ ಇತ್ಯರ್ಥಗೊಳಿಸುತ್ತಿದ್ದರು. ಇದು ಅವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಇಂದಿನ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಅವರಂತಹ ಯಜಮಾನನ ಅಗತ್ಯ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಮರಣೋತ್ತರವಾಗಿ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ಗೌರವವನ್ನು ನೀಡಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಒತ್ತಾಯಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ಅಭಿಮಾನಿ ಬಳಗದ ವತಿಯಿಂದ ನಡೆದ ಚಿತ್ರನಟ, ಮಾಜಿ ಸಚಿವ ಅಂಬರೀಶ್ ಅವರ ಏಳನೇ ವರ್ಷದ ಪುಣ್ಯಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಅಂಬರೀಶ್ ತಮ್ಮ ಜೀವಿತ ಅವಧಿಯಲ್ಲಿ ಹಣ- ಅಧಿಕಾರ, ಪ್ರಚಾರದ ಹಿಂದೆ ಹೋದವರಲ್ಲ. ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಚಿಂತಿಸಿದವರಲ್ಲ. ಉದಾರತೆ, ಸಹಜತೆಯನ್ನು ರೂಢಿಸಿಕೊಂಡಿದ್ದ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ನೀಡುವುದು ಉತ್ತಮ ಎಂದು ಪ್ರತಿಪಾದಿಸಿದರು.

ಸೇವೆ ಮತ್ತು ಅಭಿವೃದ್ಧಿ ಉದ್ದೇಶದೊಡನೆ ರಾಜಕಾರಣ ಮಾಡಿಕೊಂಡು ಬಂದಂತಹ ಅಂಬರೀಶ್ ಪಕ್ಷಾತೀತವಾಗಿ ವರ್ತಿಸುತ್ತಿದ್ದರು. ಎಲ್ಲರೊಡನೆ ವಿಶ್ವಾಸದಿಂದ ಇದ್ದುಕೊಂಡು ರಾಜಕೀಯವಾಗಿ ಅಜಾತ ಶತ್ರುತ್ವದ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು ಎಂದು ಬಣ್ಣಿಸಿದರು.

ನೇರವಂತಿಕೆ- ಹೃದಯವಂತಿಕೆಗೆ ಹೆಸರಾದ ಅಂಬರೀಶ್ ಚಿತ್ರರಂಗದಲ್ಲಿ ಹಲವು ಕಲಾವಿದರಿಗೆ ಅಪತ್ಭಾಂಧವನಾಗಿ ನೆರವಾಗಿದ್ದಾರೆ. ಯಾವುದೇ ಸಮಸ್ಯೆ ಎದುರಾದರೂ ಯಶಸ್ವಿಯಾಗಿ ಇತ್ಯರ್ಥಗೊಳಿಸುತ್ತಿದ್ದರು. ಇದು ಅವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಇಂದಿನ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಅವರಂತಹ ಯಜಮಾನನ ಅಗತ್ಯ ಇದೆ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಡಿ.ಜಯರಾಂ, ಹೊಸಹಳ್ಳಿ ಡಿ.ಅಶೋಕ್, ಎಂ.ಕೃಷ್ಣ, ಎನ್.ದೊಡ್ಡಯ್ಯ, ಅಂಬರೀಶ್ ಅಭಿಮಾನಿ ಆನಂದ್, ಶ್ರೀಧರ್‌ಗೌಡ, ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ, ಜಯರಾಂ, ನಾಗೇಶ ಉಮ್ಮಡಹಳ್ಳಿ, ವೈ.ಸಿ.ಪ್ರದೀಪ, ಮಂಚಶೆಟ್ಟಿ, ಧನಂಜಯ್, ಶಿವಕುಮಾರ್, ಎಂ.ಎನ್. ರಾಜಣ್ಣ, ಮರಿಹೆಗಡೆ ಇತರರಿದ್ದರು.