ನಾನು ಸೇರಿದಂತೆ ಶ್ರೀರಾಮುಲು, ಕರುಣಾಕರ ರೆಡ್ಡಿ ಮೂವರು ಮಂತ್ರಿಗಳಾಗಿದ್ದಾಗ ಯಾವುದೇ ಹಗರಣಗಳಲ್ಲಿ ಸಿಲುಕಿರಲಿಲ್ಲ.
ಕುರುಗೋಡು: ಕೇವಲ ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವ ಬಿ.ನಾಗೇಂದ್ರನ ರಾಜೀನಾಮೆಗೆ ಮಾತ್ರ ಪಾದಯಾತ್ರೆ ನಡೆಸುತ್ತಿಲ್ಲ. ಹಗರಣದ ಹಣ ನಿಗಮಕ್ಕೆ ಮರಳಿಸಬೇಕು. ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ಹಣದ ಲೆಕ್ಕ ನೀಡಬೇಕು. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಪುನರ್ ಚಾಲನೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಸೋತು ಚಲಾವಣೆಯಿಲ್ಲದ ನಾಣ್ಯವಾಗಿದ್ದ ಮಲ್ಲಿಕಾಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷದಲ್ಲಿರುವ ಮೂರ್ಖ ನಾಗೇಂದ್ರ ನನ್ನನ್ನು ಚಲಾವಣೆಯಿಲ್ಲದ ನಾಣ್ಯ ಎನ್ನುವುದು ಹಾಸ್ಯಾಸ್ಪದ ಎಂದರು.ನಾನು ಸೇರಿದಂತೆ ಶ್ರೀರಾಮುಲು, ಕರುಣಾಕರ ರೆಡ್ಡಿ ಮೂವರು ಮಂತ್ರಿಗಳಾಗಿದ್ದಾಗ ಯಾವುದೇ ಹಗರಣಗಳಲ್ಲಿ ಸಿಲುಕಿರಲಿಲ್ಲ. ನೀವು ಒಂದು ಬಾರಿ ಮಂತ್ರಿಯಾಗಿ ₹187ಕೋಟಿ ದಲಿತರ ಹಣ ಕೊಳ್ಳೆ ಹೊಡೆದಿದ್ದೀಯಾ ಎಂದು ಬಿ.ನಾಗೇಂದ್ರ ಮೇಲೆ ಹರಿಹಾಯ್ದರು.
ಹಣ ಕೊಳ್ಳೆ ಹೊಡೆಯುವಾಗ ನೆನಪಾಗದ ದಲಿತರ ಮೇಲಿನ ಪ್ರೀತಿ ಮಂತ್ರಿ ಪದವಿ ಕಳೆದುಕೊಂಡ ನಂತರ ನೆನಪಾಗಿದೆ. ಇವನನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ನಾನು ಹೊರಗಡೆ ಇದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಎಸ್.ಎಂ. ಕೃಷ್ಣ, ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ಕೊಂಡಯ್ಯ ಸೋನಿಯಾ ಗಾಂಧಿ ಅವರಿಗೆ ದೂರು ನೀಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಮೇಲೆ ಒತ್ತಡ ತಂದು ನನ್ನ ಮೇಲೆ ದೂರು ದಾಖಲಿಸಿ ಬಂಧಿಸಿದರು. ಅಕ್ರಮ ಗಣಿ ಆರೋಪದಿಂದ ನಿರ್ದೋಷಿಯಾಗಿ ಹೊರಗಡೆ ಬಂದಿದ್ದೇನೆ. ಗಂಗಾವತಿ ಕ್ಷೇತ್ರದ ಮತದಾರರು ನನ್ನ ಕೈ ಹಿಡಿದಿದ್ದಾರೆ. ನಾನು ಚಲಾವಣೆಯಲ್ಲಿರುವ ನಾಣ್ಯ ಎಂದು ಸಮರ್ಥಿಸಿಕೊಂಡರು.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಉದ್ಘಾಟನೆಗೆ ತೆಲಂಗಾಣ ಮತ್ತು ಆಂಧ್ರ ಸಿಎಂಗಳನ್ನು ಸೇರಿಸಿ ಅದ್ಧೂರಿ ಕಾರ್ಯಕ್ರಮ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ಚರ್ಚಿಸಲು ನೆನಪಾಗಿಲ್ಲ. ಇದು ರೈತ ವಿರೋಧಿ ಎನ್ನುವುದಕ್ಕೆ ಉತ್ತಮ ನಿರ್ದಶನ ಎಂದರು.ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರಿದ್ದರೂ ಕ್ಷೇತ್ರದ ರೈತರಿಗೆ ನೀರು ಬಿಡಿಸದ ಶಾಸಕ ಜೆ.ಎನ್. ಗಣೇಶ್ ಕಾಲುವೆಯ ಮೇಲೆ ತೊರಿಕೆಗೆ ಓಡಾಡುತ್ತಿದ್ದಾನೆ. ನಿಗಮದ ನಿಯಮದಂತೆ ಕಾಲುವೆಗಳಿಗೆ ನೀರು ಹರಿಸಿದರೂ ನಾನೇ ಹೆಚ್ಚು ನೀರು ಬಿಡಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ನಾನು ಶಾಸಕರಾಗಿದ್ದ ಎರಡು ಅವಧಿಯಲ್ಲಿ ಯಾವುದೇ ಕಮಿಷನ್ ಕೇಳಿರಲಿಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ಕೇಳಿಲ್ಲ. ಪಾರದರ್ಶಕವಾಗಿ ಜನರ ಸೇವೆ ಮಾಡಿದ್ದೇನೆ. ಆದರೆ ಈಗಿನ ಶಾಸಕ ಕಮಿಷನ್ ಮೊದಲು ಕೊಟ್ಟರೆ ಮಾತ್ರ ಭೂಮಿ ಪೂಜೆಗೆ ಬರುವುದು. ಹಣಕೊಟ್ಟ ಅಧಿಕಾರಿಗಳನ್ನು ಮಾತ್ರ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ದಂಧೆಯಲ್ಲಿ ತೊಡಗಿದ್ದಾರೆ. ಬಡವ ಎಂದು ಜನರಿಗೆ ಮಂಕು ಬೂದಿ ಎರಚಿ ಮತ ಹಾಕಿಸಿಕೊಂಡು ಎರಡು ಅವಧಿಯಲ್ಲಿ ನೂರಾರು ಎಕರೆ ಭೂಮಿ ಖರೀದಿಸಿದ್ದಾರೆ. ರೈತರಿಂದ ಕಡಿಮೆ ಹಣದಲ್ಲಿ ಭೂಮಿ ಖರೀದಿಸಿ ನಿವೇಶನಗಳಾಗಿ ಪರಿವರ್ತಿಸಿ ಅವರಿಗೆ ಅಧಿಕ ಹಣಕ್ಕೆ ಮಾರಾಟ ಮಾಡುವ ರಿಯಲ್ ಎಸ್ಟೇಟ್ ನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಅನೀಲ್ ಕುಮಾರ್ ಮೋಕಾ, ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ, ಎ.ತಿಮ್ಮಾರೆಡ್ಡಿ, ಗುತ್ತಿಗನುರು ವಿರುಪಕ್ಷಿಗೌಡ, ದಮ್ಮೂರು ಶೇಖರ್, ಜೆ. ಸೋಮಶೇಖರ ಗೌಡ ಮತ್ತು ಹನುಮಂತಪ್ಪ ಇದ್ದರು.
ಕುರುಗೋಡಿನ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿದರು.