ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿಗೆ 18 ಸಾವಿರ ರೂಪಾಯಿ ದಾಖಲಿಸಿದರೂ ರೈತರಿಗೆ 17 ಸಾವಿರ ರುಪಾಯಿಗಳಂತೆ ಮಾತ್ರ ಲೆಕ್ಕ ಮಾಡಲು ವರ್ತಕರಿಗೆ ತಿಳಿಸಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.ನಗರದ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಮೂರು ವರ್ಷಗಳಿಂದ ಕೊಬ್ಬರಿಗೆ ಬೆಲೆ ಸಿಗದೇ ತತ್ತರಿಸಿದ್ದ ಜಿಲ್ಲೆಯ ರೈತರಿಗೆ ಎರಡು ತಿಂಗಳಿನಿಂದ ಕೊಬ್ಬರಿ ಬೆಲೆಯಲ್ಲಿ ಏರಿಕೆ ಕಾಣುತ್ತಿರುವುದು ಜೀವ ಬಂದಂತಾಗಿದೆ. ಇಂತಹ ಸಮಯದಲ್ಲಿ ಹರಾಜು ಬೆಲೆಗಿಂತಾ ಕಡಿಮೆ ಬೆಲೆಗೆ ರೈತರಿಗೆ ಲೆಕ್ಕ ಮಾಡಲು ಸೂಚಿಸಿರುವುದು ವ್ಯಾಪಾರಸ್ತರಿಗೆ ಮಾತ್ರ ಅನುಕೂಲವಾಗುತ್ತಿದೆ. ವ್ಯಾಪಾರಸ್ಥರ ಹಿತಕ್ಕಾಗಿ ರೈತರ ಹಿತಾಸಕ್ತಿ ಬಲಿಕೊಡುವುದು ಸರಿಯಾದ ಕ್ರಮ ಅಲ್ಲ ಎಂದು ಆಪಾದಿಸಿದರು. ಒಂದು ತಿಂಗಳಿಂದ ಹೇಮಾವತಿ ನಾಲೆಯಲ್ಲಿ ಸತತವಾಗಿ ನೀರು ಹರಿಯುತ್ತಿದ್ದರೂ ತಾಲೂಕು ಆಡಳಿತ ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆ ಮತ್ತು ನಗರದ ಅಮಾನಿಕೆರೆಯನ್ನು ತುಂಬಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಮುಂದೆ ನೀರಿನ ಸಮಸ್ಯೆ ಉಂಟಾದರೆ ಅಧಿಕಾರಿಗಳು ಮತ್ತು ಶಾಸಕರೇ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು. ಈಚನೂರು ಕೆರೆಗೆ ಕೊಳಚೆ ನೀರು ಹೋಗುತ್ತಿದೆ. ಅಲ್ಲಿನ ಗ್ರಾಮಸ್ಥರು ಹೋರಾಟ ಮಾಡಿದ ಮೇಲೆ ಕೊಳಚೆಯನ್ನು ಬೇರೆಡೆಗೆ ತಿರುಗಿಸುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ಜಾಕ್‌ವೆಲ್‌ಗೆ ಮೋಟಾರ್ ಅಳವಡಿಸುವ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.