ನೀವು ಪಡೆದ ಮುಡಾ ನಿವೇಶನ ವಾಪಸ್‌ ನೀಡಿ: ರಾಜಣ್ಣ

| Published : Jul 28 2024, 02:10 AM IST

ಸಾರಾಂಶ

ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದ ಹಗರಣದ ಹೆಸರಿನಲ್ಲಿ ಅಹಿಂದ ವರ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ಪ್ರತಿಪಕ್ಷಗಳು ಮುಂದುವರೆಸಿದರೆ, ಅಹಿಂದ ವರ್ಗಗಳು ಸೇರಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು

ಕನ್ನಡಪ್ರಭ ವಾರ್ತೆ ತುಮಕೂರುಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದ ಹಗರಣದ ಹೆಸರಿನಲ್ಲಿ ಅಹಿಂದ ವರ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ಪ್ರತಿಪಕ್ಷಗಳು ಮುಂದುವರೆಸಿದರೆ, ಅಹಿಂದ ವರ್ಗಗಳು ಸೇರಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಡಾದಲ್ಲಿ ಮುಖ್ಯಮಂತ್ರಿಗಳ ಕುಟುಂಬದವರು ನಿವೇಶನ ಪಡೆದಿದ್ದಾರೆ ಎಂಬುದನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮೈಸೂರಿನಿಂದ ಪಾದಯಾತ್ರೆ ಮಾಡುವುದಾಗಿ ಹೇಳಿಕೆ ನೀಡಿವೆ. ಅವರು ಪಾದಯಾತ್ರೆ ಮಾಡುವುದಾದರೆ ಅಹಿಂದ ವರ್ಗಗಳು ಸೇರಿ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ ಎಂದರು.ರಾಜ್ಯದಲ್ಲಿ ಅಹಿಂದ ವರ್ಗಗಳ ನಾಯಕರು ಅಧಿಕಾರಕ್ಕೆ ಬಂದಾಗ ಅವರ ವಿರುದ್ಧದ ಸಣ್ಣಪುಟ್ಟ ಆರೋಪಗಳನ್ನು ವೈಭವೀಕರಿಸಿ ಕಳಂಕಿತ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಕಟ್ಟುವ ಕೆಲಸವನ್ನು ಈ ಹಿಂದಿನಿಂದಲೂ ವಿರೋಧ ಪಕ್ಷಗಳು ಮಾಡುತ್ತಾ ಬಂದಿವೆ. ಈಗಲೂ ಸಹ ಪ್ರತಿಪಕ್ಷಗಳು ಇದೇ ಕೆಲಸವನ್ನು ಮಾಡುತ್ತಿದ್ದು, ಇದು ಹೀಗೆ ಮುಂದುವರೆದರೆ ಜಿಲ್ಲೆಯಲ್ಲಿ ಅಹಿಂದ ವರ್ಗಗಳು ಸೇರಿ ಬೃಹತ್ ಹೋರಾಟ ನಡೆಸುವ ಚಿಂತನೆ ನಡೆಸಲಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ವರ್ಗದ ನಾಯಕರು. ಇವರ ಕ್ಲೀನ್ ಇಮೇಜ್‌ಗೆ ಬಸಿ ಬಳಿಯುವ ಪ್ರಯತ್ನವನ್ನು ವಿಪಕ್ಷಗಳು ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದರೆ ಅದು ಅಹಿಂದ ವರ್ಗದ ಜನರ ವಿರುದ್ಧ ಮಾಡುತ್ತಿರುವ ಪಿತೂರಿಯಾಗಿದೆ. ಇದನ್ನು ಅಹಿಂದ ವರ್ಗದ ಜನ ಸಹಿಸುವುದಿಲ್ಲ ಎಂದರು.

ಅಹಿಂದ ವರ್ಗಕ್ಕೆ ಪಕ್ಷ ಎಂಬುದಿಲ್ಲ. ಪಕ್ಷಾತೀತವಾಗಿ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈ ಹಿಂದೆಯೇ ಪ್ರತಿಪಕ್ಷಗಳ ನಾಯಕರು ನಿವೇಶನಗಳನ್ನು ಪಡೆದು ಫಲಾನುಭವಿಗಳಾಗಿದ್ದಾರೆ. ಮುಖ್ಯಮಂತ್ರಿಗಳ ಬಗ್ಗೆ ಆರೋಪ ಮಾಡುವುದಕ್ಕಿಂತ ಮುನ್ನ ಅವರು ಪಡೆದಿರುವ ನಿವೇಶನಗಳನ್ನು ಮುಡಾಗೆ ವಾಪಸ್ ಕೊಟ್ಟು ನಂತರ ಆರೋಪ ಮಾಡಲಿ ಎಂದು ಪ್ರತಿಪಕ್ಷ ನಾಯಕರಿಗೆ ಸವಾಲೆಸೆದರು.

ನಾ.. ಕಳ್ಳ.. ಪರರನ್ನು ನಂಬ.. ಎಂಬ ಗಾದೆ ಮಾತಿನಂತಾಗಿದೆ ವಿರೋಧ ಪಕ್ಷದವರ ಆರೋಪ. ಇವರುಗಳೇ ಮುಡಾದ ಫಲಾನುಭವಿಗಳಾಗಿದ್ದಾರೆ. ಈ ಬಗ್ಗೆ 2011ರ ಮಾರ್ಚ್ 17 ರಂದು ವಿಧಾನ ಪರಿಷತ್‌ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೇ ಮುಡಾದಲ್ಲಿ ಯಾರ್ಯಾರು ನಿವೇಶನ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ಯಾರು ಹೆಚ್ಚು ಪ್ರಶ್ನೆ ಮಾಡುತ್ತಿದ್ದಾರೋ ಅವರೇ ಹೆಚ್ಚು ಮುಡಾದ ಫಲಾನುಭವಿಗಳಾಗಿದ್ದಾರೆ ಎಂದು ಕಿಡಿಕಾರಿದರು.ರಾಜ್ಯದಲ್ಲಿ ಅತಿವೃಷ್ಠಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಆದರೆ ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡಲು ವಿಪಕ್ಷಗಳು ಸಹಕಾರ ನೀಡದೆ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡಿ ಅತಿವೃಷ್ಟಿ ಬಗ್ಗೆ ಗಮನ ಹರಿಸದೇ ಇರುವುದು ಖಂಡನೀಯ ಎಂದರು.ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರಗಳು ನಡೆದು ಸಾರ್ವಜನಿಕರ ಹಣ ದುರುಪಯೋಗವಾಗಿರುವ ಬಗ್ಗೆ ಈಗಾಗಲೇ ಎಸ್‌ಐಟಿಯಿಂದ ತನಿಖೆ ನಡೆದಿದೆ. ಇದರ ಜತೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐನಿಂದಲೂ ತನಿಖೆ ನಡೆಯುತ್ತಿದೆ. ಈ ಮೂರು ತನಿಖಾ ಸಂಸ್ಥೆಗಳು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರಕ್ಕೆ ಕಾರಣರಾದವರನ್ನು ಪತ್ತೆ ಹಚ್ಚುವ ಜತೆಗೆ ದುರುಪಯೋಗವಾಗಿರುವ ಹಣವನ್ನು ವಸೂಲಾತಿ ಮಾಡಬೇಕು. ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿದೆ. ಇದರಿಂದಲೇ ಇ.ಡಿ.ತನಿಖಾ ಸಂಸ್ಥೆಯನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ ಎಂದರು.

ಈ ಹಿಂದೆ ಇ.ಡಿ. ತನಿಖಾ ಸಂಸ್ಥೆ ಕೇಂದ್ರ ಹಣಕಾಸು ಸಚಿವರ ವ್ಯಾಪ್ತಿಯಲ್ಲಿತ್ತು. ಆದರೆ ಅಮಿತ್ ಶಾ ಗೃಹ ಸಚಿವರಾದ ನಂತರ ಈ ಇ.ಡಿ. ತನಿಖಾ ಸಂಸ್ಥೆಯನ್ನು ಹಣಕಾಸು ಸಚಿವರ ವ್ಯಾಪ್ತಿಯಿಂದ ಗೃಹ ಇಲಾಖೆ ವ್ಯಾಪ್ತಿಗೆ ಪಡೆದರು ಎಂದು ತಿಳಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ವೇಣುಗೋಪಾಲ್ ಉಪಸ್ಥಿತರಿದ್ದರು.