ಲಿಂಗಾಯತ ಸಮಾಜ ದೊಡ್ಡದಿದೆ. ಆದರೆ, ಸಮಾಜದ ಯಾವುದೇ ಕಾರ್ಯಕ್ರಮ ನಡೆಸಲು, ಸೇರಲು ಸಮುದಾಯ ಭವನ ಇಲ್ಲವಾಗಿದೆ

ಕನಕಗಿರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕಕ್ಕೆ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ಸ್ಥಳೀಯ ವೀರಶೈವ ಲಿಂಗಾಯತ ಸಮಾಜದವರು ಮಂಗಳವಾರ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿಗೆ ಮನವಿ ಸಲ್ಲಿಸಿದರು.

ಜಿಪಂ ಮಾಜಿ ಸದಸ್ಯ ವಿರೇಶ ಸಮಗಂಡಿ ಮಾತನಾಡಿ, ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜ ದೊಡ್ಡದಿದೆ. ಆದರೆ, ಸಮಾಜದ ಯಾವುದೇ ಕಾರ್ಯಕ್ರಮ ನಡೆಸಲು, ಸೇರಲು ಸಮುದಾಯ ಭವನ ಇಲ್ಲವಾಗಿದೆ. ಪಟ್ಟಣವೂ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸಾಕಷ್ಟು ಶಾಲಾ, ಕಾಲೇಜುಗಳು ಪಟ್ಟಣದಲ್ಲಿ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ವಿದ್ಯಾರ್ಥಿ ನಿಲಯ ಆರಂಭಿಸುವುದು ಸೇರಿ ಸಮುದಾಯದ ಶ್ರೇಯೋಭಿವೃದ್ಧಿಯ ಕೆಲಸಕ್ಕೆ ಕಟ್ಟಡದ ಅವಶ್ಯವಿದ್ದು, ಅದಕ್ಕೆ ಸಿಎ ನಿವೇಶನ ಅಗತ್ಯವಿದೆ. ಈಗಾಗಲೇ ವೀರಶೈವ ಮಹಾಸಭಾವು ಸಮುದಾಯದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡುತ್ತಿದೆ. ಪಟ್ಟಣದಲ್ಲಿ ೧೦ ಸಾವಿರ ಚದರ ಅಡಿಯ ಸಿಎ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪಪಂ ಮುಖ್ಯಾಧಿಕಾರಿ ಮಾತನಾಡಿ, ಲಕ್ಷ್ಮಣ ಕಟ್ಟಿಮನಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪಪಂ ಸದಸ್ಯರಾದ ಸಂಗಪ್ಪ ಸಜ್ಜನ, ಸುರೇಶ ಗುಗ್ಗಳಶೆಟ್ಟರ್‌, ಅನಿಲ ಬಿಜ್ಜಳ, ಶರಣೇಗೌಡ, ರಾಜಾಸಾಬ್‌ ನಂದಾಪೂರ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ಮಹಾಸಭಾ ತಾಲೂಕು ಯುವ ಘಟಕದ ಅಧ್ಯಕ್ಷ ಶರಣಬಸವ ಹುಲಿಹೈದರ, ಶರಣಪ್ಪ ಭತ್ತದ, ನಾಗರಾಜ ಬಾವಿಕಟ್ಟಿ, ಚನ್ನಪ್ಪ ತೆಗ್ಗಿನಮನಿ, ರವಿ ಪಾಟೀಲ್, ಪ್ರಶಾಂತ ತೆಗ್ಗಿನಮನಿ, ನೀಲಕಂಠಗೌಡ, ಶರಣಪ್ಪ ಭತ್ತದ, ಶಿವಪ್ರಕಾಶ ಸಜ್ಜನ ಸೇರಿದಂತೆ ಇತರರಿದ್ದರು.