ಸಾರಾಂಶ
ಶಿಕ್ಷಕರ ಕಾರ್ಯವು ಕೇವಲ ಓದು, ಬರಹ ಮತ್ತು ಲೆಕ್ಕಾಚಾರ ಕಲಿಸುವುದಲ್ಲ, ಅವರ ನಿಜವಾದ ಕಾಯಕವೆಂದರೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದು
ಗದಗ: ಶಿಕ್ಷಣ ವ್ಯವಸ್ಥೆಯ ಬಹುಮುಖ್ಯ ಅಂಗಗಳಾಗಿರುವ ಶಿಕ್ಷಕರು ಸೃಜನಶೀಲ ಮತ್ತು ಮೌಲ್ಯಯುತ ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಎಂ. ಬಸವಲಿಂಗಪ್ಪ ಹೇಳಿದರು.
ಅವರು ನಗರದ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯ ಸಭಾಭವನದಲ್ಲಿ ವಿದ್ಯಾದಾನ ಸಮಿತಿ ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗಾಗಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.ಶಿಕ್ಷಕರ ಕಾರ್ಯವು ಕೇವಲ ಓದು, ಬರಹ ಮತ್ತು ಲೆಕ್ಕಾಚಾರ ಕಲಿಸುವುದಲ್ಲ, ಅವರ ನಿಜವಾದ ಕಾಯಕವೆಂದರೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದು. ಮಕ್ಕಳಲ್ಲಿ ಚಿಕಿತ್ಸಕ ಮನೋಭಾವನೆ ಬೆಳೆಸುವುದು ಇಂದಿನ ಅವಶ್ಯಕತೆ ಆಗಿದೆ. ನಮ್ಮ ಭಾರತೀಯ ಪರಂಪರಾಂಗತವಾಗಿ ಬಂದ ನೈತಿಕ ಮೌಲ್ಯ ಹೇಳಿಕೊಡುವುದರ ಜತೆಗೆ ಆಧುನಿಕ ತಂತ್ರಜ್ಞಾನ, ಪಾಠೋಪಕರಣ ಮತ್ತು ಕಲಿಕಾ ಸಾಧನ, ಸಲಕರಣಗಳನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಬಳಸಿಕೊಂಡು ಪ್ರಭಾವಯುತವಾಗಿ ಬೋಧನೆ ಮಾಡಬೇಕು ಎಂದರು.
ಶಿಕ್ಷಕರು ಅನುಸರಿಸಬೇಕಾದ ನೀತಿ ನಿಯಮ, ರಜೆ ಕುರಿತಾದ ಕಾಯ್ದೆ, ಆಡಳಿತ ಮಂಡಳಿಯವರ ಅಧಿಕಾರ ಮುಂತಾದ ಶೈಕ್ಷಣಿಕ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾದಾನ ಸಮಿತಿ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಎಲ್.ಚವ್ಹಾಣ, ಡಾ. ಬಿ.ಎಸ್.ರಾಠೋಡ, ಎಸ್.ವಿ. ಬಂಡಿ, ಎಂ.ಆರ್. ಡೊಳ್ಳಿನ, ಮಹಾಂತೇಶ ಹವಾಲ್ದಾರ ಹಾಗೂ ವಿದ್ಯಾದಾನ ಸಮಿತಿ ಸಿಬ್ಬಂದಿ ವರ್ಗದವರು ಇದ್ದರು. ಪ್ರಾ. ಎಂ.ಸಿ. ಕಟ್ಟಿಮನಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಮುಖ್ಯೋಪಾಧ್ಯಾಯ ಆರ್.ಆರ್. ಜಾಲಿಹಾಳ ವಂದಿಸಿದರು.