ಹಾವೇರಿ: ಗುಣಮಟ್ಟದ ಶಿಕ್ಷಣ, ಒಳ್ಳೆಯ ಸಂಸ್ಕಾರ ಪಡೆದ ವ್ಯಕ್ತಿ ಒಳ್ಳೆಯ ಪ್ರಜೆ ಆಗಿ ದೇಶ ಸೇವೆ ಮಾಡುತ್ತಾರೆ.ಶಿಕ್ಷಣದ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರವೂ ಅವಶ್ಯ. ಶಿಕ್ಷಣದೊಂದಿಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಅವರ ತಲೆಗೆ ಬಂಗಾರದ ಕಳಸ ಇಟ್ಟಂತೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮದ ರಸ್ತೆಯಲ್ಲಿ ನಿರ್ಮಾಣವಾಗಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶಾಲಾ ಕಟ್ಟಡದ ಲೋಕಾರ್ಪಣೆ, ಅಕ್ಷರಾಭ್ಯಾಸ ಹಾಗೂ ವಿದ್ಯಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ವಿದ್ಯಾಕೇಂದ್ರದ ಉದ್ಘಾಟನೆ ಮೂಲಕ ಹಾವೇರಿ ಇತಿಹಾಸದಲ್ಲಿ ಶೈಕ್ಷಣಿಕವಾಗಿ ಮಹತ್ತರ ಹೆಜ್ಜೆ ಇರಿಸಿದಂತಾಗಿದೆ. ದೇಶ ಭಕ್ತ ಶ್ರೇಷ್ಠ ಪ್ರಜೆಗಳನ್ನು ರೂಪಿಸುವ ಕೆಲಸವನ್ನು ಈ ವಿದ್ಯಾಕೇದ್ರ ಮಾಡುತ್ತದೆ ಎಂದರು.ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡಿದರೆ ಅವರು ದೇಶದ ಆಸ್ತಿ ಆಗುತ್ತಾರೆ. ಪಡೆದ ವಿದ್ಯೆಗೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ, ಶಿಕ್ಷಣ ಬಳಸಿದಂತೆ ಬೆಳೆಯುತ್ತೆ. ನಕ್ಷತ್ರವಾಗಿ ಹೊಳೆಯುತ್ತೆ ವಿನಃ ಕೊಳೆಯುವುದಿಲ್ಲ, ಮೊಬೈಲ್ ಸಂಸ್ಕೃತಿಯನ್ನು ಬಿಡಿಸುವ ಜವಾಬ್ದಾರಿ ತಾಯಂದಿರ ಕೈಯಲ್ಲಿದೆ. ಆರಂಭದ 3 ವರ್ಷ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟರೆ ಅವರು ನೂರು ವರ್ಷ ಶ್ರೇಷ್ಠ ವ್ಯಕ್ತಿಗಳಾಗಿ ಬಾಳುತ್ತಾರೆ. ಮೊಬೈಲ್ ಸಂಸ್ಕೃತಿ ನಮ್ಮಿಂದ ದೂರವಾಗಿ ಓದುವ ಸಂಸ್ಕೃತಿ ಹೆಚ್ಚಾಗಬೇಕು. ಬೇರೆ ಜಿಲ್ಲೆಯ ಮಕ್ಕಳು ಸಹ ಇಲ್ಲಿಗೆ ಬಂದು ಸರದಿಯಲ್ಲಿ ನಿಂತು ದಾಖಲಾತಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಈ ವಿದ್ಯಾಕೇಂದ್ರ ಬೆಳೆಯಲಿ ಎಂದು ಆಶಿಸಿದರು.ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್‌ನ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಬಡಮಕ್ಕಳಿಗೆ ಐಐಟಿ, ಮೆಡಿಕಲ್ ಕಲಿಯಲು ತರಬೇತಿ ಕೊಡಿಸುವ ಕೆಲಸ ಮಾಡುತ್ತಿದೆ. ಒಂದು ವರ್ಷದ ಹಿಂದೆ ಇಲ್ಲಿ ಭೂಮಿ ಪೂಜೆ ನೆರವೇರಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ತರಗತಿ ಆರಂಭಿಸುವುದಾಗಿ ವಾಗ್ವಾದ ಮಾಡಿದ್ದೇವು. ಅನೇಕ ಅಡೆತಡೆಗಳ ನಡುವೆಯೂ ಇಲ್ಲಿನ ಉದ್ಯಮಿ ಪವನ ಬಹದ್ದೂರದೇಸಾಯಿ ಅವರ ಸಹಕಾರದೊಂದಿಗೆ 7ಎಕರೆ ಜಮೀನಿನಲ್ಲಿ 85ಸಾವಿರ ಚದರ್ ಅಡಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ರಾಷ್ಟ್ರೋತ್ಥಾನದ ಮೇಲಿನ ವಿಶ್ವಾಸದಿಂದ ಈ ವರ್ಷ 560ಕ್ಕೂ ಹೆಚ್ಚು ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ ಎಂದರು.ಶಾಲೆ ಅಂದರೆ ಅದೊಂದು ಕಟ್ಟಡ ಅಲ್ಲ, ಪ್ರತಿಭಾವಂತ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವರಿಗೆ 10 ದಿನಗಳ ಕಾಲ ಪಂಚಮುಖಿ ಶಿಕ್ಷಣದ ಬಗ್ಗೆ ದಾವಣಗೆರೆಯಲ್ಲಿ ತರಬೇತಿ ಕೊಟ್ಟಿದ್ದೇವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಕಲಿಸುತ್ತೇವೆ. ನಮ್ಮ ಮಕ್ಕಳು ಪ್ರತಿಭಾವಂತರಾಗಿ ದೇಶಕ್ಕೆ ಕೀರ್ತಿ ತರುವ ವಿಶ್ವಾಸವಿದೆ ಎಂದರು.

ಆರ್‌ಎಸ್‌ಎಸ್‌ನ ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹರಾದ ರಾಘವೇಂದ್ರ ಕಾಗವಾಡ ಮಾತನಾಡಿ, ವಿದ್ಯಾಕೇಂದ್ರದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ನೀಡುತ್ತೇವೆ. ದೇಶದ ಮಹಾನ್ ಪುರುಷರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಕಲಿಸುತ್ತೇವೆ. ದೇಶದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಕೆಲಸ ಮಾಡಲಿದೆ ಎಂದರು.ಡಿಡಿಪಿಐ ಮೋಹನ್ ದಂಡಿನ್ ಮಾತನಾಡಿ, ಶಿಕ್ಷಣ ಇಲಾಖೆಯ ನಿಯಮದ ಪ್ರಕಾರವೇ ಭವ್ಯವಾದ ಕಟ್ಟಡ ನಿರ್ಮಾಣವಾಗಿದೆ, ಶಾಲೆಯೊಂದಿಗೆ ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳಲ್ಲಿ ನಕಾರಾತ್ಮಕ ವಿಚಾರಕ್ಕಿಂತ ಹೆಚ್ಚಾಗಿ ಸಕಾರಾತ್ಮಕ ವಿಚಾರಗಳ ಬಗ್ಗೆ ಹೆಚ್ಚು ಹೇಳಬೇಕು ಎಂದರು. ರಾಷ್ಟ್ರೋತ್ಥಾನ ಪರಿಷತ್ ಸದಸ್ಯರಾದ ಪವನ ಬಹದ್ದೂರದೇಸಾಯಿ, ಪ್ರಧಾನ ಗುರುಮಾತೆ ಶ್ಯಾಮಲಾ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ್, ಹಾವೇರಿ ವಿವಿ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ, ಹುಡಾ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಬಿಇಒ ಮಾರುತಿ ಇತರರಿದ್ದರು. ರಾಷ್ಟ್ರೋತ್ಥಾನ ಪರಿಷತ್ ಸದಸ್ಯರಾದ ಜಯಣ್ಣ ಸ್ವಾಗತಿಸಿದರು. ದಾವಣಗೆರಿ, ಹಾನಗಲ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮಕ್ಕಳು, ಶಿಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.