ಇಂದಿನ ದಿನಮಾನಗಳಲ್ಲಿ ನೈತಿಕತೆ ಕುಸಿಯುತ್ತಿದ್ದು ಅದನ್ನು ಭದ್ರಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದು ಶಾಲಾ ಪೂರ್ವ ಶಿಕ್ಷಣದಲ್ಲಿಯೇ ಮಾಡಬೇಕಿದೆ.
ಧಾರವಾಡ:
ಮರಗಳಿಗೆ ಬೇರು ಹೇಗೆ ಮುಖ್ಯವೋ ಅದೇ ರೀತಿ ಮಕ್ಕಳಿಗೆ ಬಾಲ್ಯದಲ್ಲಿ ಸಿಗುವ ಸಂಸ್ಕಾರ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು ಎಂದು ಡಾ. ಸೌಭಾಗ್ಯ ಕುಲಕರ್ಣಿ ಹೇಳಿದರು.ಮಾಳಮಡ್ಡಿ ವನವಾಸಿ ಮಂದಿರದಲ್ಲಿ ನಡೆದ ಶ್ರೀವಿಶ್ವೇಶತೀರ್ಥ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿದ ಅವರು, ಇಂದಿನ ದಿನಮಾನಗಳಲ್ಲಿ ನೈತಿಕತೆ ಕುಸಿಯುತ್ತಿದ್ದು ಅದನ್ನು ಭದ್ರಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದು ಶಾಲಾ ಪೂರ್ವ ಶಿಕ್ಷಣದಲ್ಲಿಯೇ ಮಾಡಬೇಕಿದೆ. ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೂ ಎನ್ನುವಂತೆ ಆರಂಭದಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಧರ್ಮ, ಆಚಾರ-ವಿಚಾರ, ನೈತಿಕತೆ, ರಾಷ್ಟ್ರಭಕ್ತಿಯ ಕುರಿತು ಹೇಳಿಕೊಟ್ಟಾಗ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದಾಗಿದೆ ಎಂದರು.
ಬಹುತೇಕ ಪೋಷಕರು ಹಣದ ಹಿಂದೆ ಓಡುತ್ತಿದ್ದು ತಮ್ಮ ಜೀವನ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುವುದರ ಜತೆಗೆ ಮಗುವಿನ ಅಸಹಜ ಬೆಳವಣಿಗೆಗೆ ಕಾರಣವಾಗುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಕುರಿತು ಸ್ವತಃ ಕಾಳಜಿ ತೋರಿಸುವುದು ಅವಶ್ಯವಾಗಿದೆ. ಮಕ್ಕಳಿಗೆ ದುಬಾರಿ ಉಡುಗೊರೆ ನೀಡುವ ಪೋಷಕರು, ಅವರನ್ನು ಗೊತ್ತಿದ್ದು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.ಪ್ರಾಸ್ತಾವಿಕ ಮಾಡನಾಡಿದ ಟ್ರಸ್ಟಿ ಕೃಷ್ಣ ದೇಶಾಪಾಂಡೆ, ಸಂಸ್ಥೆ ಬೆಳೆದು ಬಂದ ಹಾದಿಯ ಕುರಿತು ವಿವರಿಸಿದರು. ಮುಖ್ಯ ಶಿಕ್ಷಕಿ ನೀಲಾಂಬರಿ ದೇಶಪಾಂಡೆ, ಶ್ರೀದೇವಿ ಕದಂ, ಸಂಸ್ಥೆಯ ಅಧ್ಯಕ್ಷ ಹರ್ಷ ಡಂಬಳ, ಪೂರ್ಣಿಮಾ ಕುಲಕರ್ಣಿ, ಸುಮಂಗಲಾ ದಾಂಡೇವಾಲೆ, ಅಂಕಿತಾ, ಅರ್ಚನಾ, ಸುನಂದಾ, ಪೋಷಕರಿದ್ದರು.