ಸಾರಾಂಶ
ಕಮತಗಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಶಿಸ್ತು ಹಾಗೂ ಉತ್ತಮ ಸಂಸ್ಕಾರವನ್ನೂ ನೀಡುವ ಜವಾಬ್ದಾರಿ ಇಂದಿನ ಶಿಕ್ಷಕರ ಹಾಗೂ ಪಾಲಕರ ಮೇಲಿದೆ ಎಂದು ಇಳಕಲ್ ಡಯಟ್ ಕಾಲೇಜಿನ ಉಪನ್ಯಾಸಕಿ ಸಿದ್ದಮ್ಮ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಕಮತಗಿ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಶಿಸ್ತು ಹಾಗೂ ಉತ್ತಮ ಸಂಸ್ಕಾರವನ್ನೂ ನೀಡುವ ಜವಾಬ್ದಾರಿ ಇಂದಿನ ಶಿಕ್ಷಕರ ಹಾಗೂ ಪಾಲಕರ ಮೇಲಿದೆ ಎಂದು ಇಲಕಲ್ ಡಯಟ್ ಕಾಲೇಜಿನ ಉಪನ್ಯಾಸಕಿ ಸಿದ್ದಮ್ಮ ಪಾಟೀಲ ಹೇಳಿದರು.ಪಟ್ಟಣದ ಹೊರವಲಯದಲ್ಲಿನ ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾತೋಶ್ರೀ ಬಂದವ್ಬ ವೀರಪ್ಪ ಕಡ್ಲಿಮಟ್ಟಿ ಎಜ್ಯುಕೇಶನ್ ಮತ್ತು ರೂರಲ್ ಸೋಸಿಯಲ್ ವೆಲ್‌ಫೇರ್ ಟ್ರಸ್ಟ್‌ನ ಶುಭೋದಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 8ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಆರೋಗ್ಯದ ಮೇಲೆ ನಿಗಾವಹಿಸಬೇಕು. ಏಕೆಂದರೆ ಆರೋಗ್ಯವಂತ ಮಕ್ಕಳು ಹಾಗೂ ಯುವಜನರು ದೇಶದ ಸಂಪತ್ತು, ಮಕ್ಕಳು ಆರೋಗ್ಯವಾಗಿದ್ದಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸುಕರಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ, ಗ್ರಾಮೀಣ ಭಾಗದಲ್ಲಿ ಶುಭೋದಯ ಆಂಗ್ಲ ಮಾಧ್ಯಮ ಶಾಲೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಮುಂದಿನ ದಿನಗಳಲ್ಲಿ ಪಿಯುಸಿ, ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಿದರೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಬಹಳಷ್ಟು ಅನಕೂಲವಾಗುತ್ತದೆ ಎಂದರು.ಶಿಕ್ಷಣ ಸಂಯೋಜಕ ಪಿ.ಎಸ್. ಚವ್ಹಾಣ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಖ್ಯ ವೇದಿಕೆ ಕಲ್ಪಿಸಿಕೊಟ್ಟರೆ ಅವರಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತದೆ ಎಂದರು.
ಕಮತಗಿ ಹೊಳೆ ಹುಚ್ಚೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಶುಭೋದಯ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮುರುಗೇಶ ಐ ಕಡ್ಲಿಮಟ್ಟಿ ಅಧ್ಯಕ್ಷತೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ್ ಕಿಲ್ಲೇದಾರ, ಪಾರ್ವತಿ ಪರಮೇಶ್ವರ ಬ್ಯಾಂಕಿನ ಅಧ್ಯಕ್ಷ ಎಸ್.ಎಸ್. ಮಂಕಣಿ, ಶಿವಾಚಾರ ಸಮಾಜದ ಅಧ್ಯಕ್ಷ ಮಾರುದ್ರಪ್ಪ ಚೌಡಾಪೂರ, ವಿಜನ್ ಕಿಡ್ಸ್ ಶಾಲೆ ಅಧ್ಯಕ್ಷ ಎನ್.ಎಲ್. ತಹಸೀಲ್ದಾರ್, ಸಂಸ್ಥೆಯ ನಿರ್ದೇಶಕ ಹುಚ್ಚಪ್ಪ ಸಿಂಹಾಸನ, ರಮೇಶ ಜಮಖಂಡಿ, ಶಾಲೆಯ ಮುಖ್ಯಶಿಕ್ಷಕ ಸಂಜೀವ ದೇಸಾಯಿ, ಶಿಕ್ಷಕರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.