ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಕ್ಕಳಿಗೆ ಕೇವಲ ಆಸ್ತಿ ಮಾಡಿದರೆ ಸಾಲದು, ಜವಾಬ್ದಾರಿ ಜೊತೆಗೆ ಬದುಕನ್ನು ಎದುರಿಸುವ ಶಕ್ತಿಯನ್ನು ನೀಡಬೇಕು ಎಂದು ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ ಹೇಳಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 51ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ನಿರ್ವಹಣೆಯಲ್ಲಿ ಹೆಣ್ಣು ಮತ್ತು ಗಂಡಿನ ಪಾತ್ರಗಳನ್ನು ಕುರಿತು ಮಕ್ಕಳ ಜೊತೆಗೂಡಿ ತಮ್ಮ ಅಭಿಪ್ರಾಯ ಮಂಡಿಸಿದ ದಯಾನಂದ್, ಪ್ರಕೃತಿಯಲ್ಲಿ ಯಾವುದೂ ಮೇಲಲ್ಲ ಅಥವಾ ಯಾವುದೂ ಕೀಳಲ್ಲ. ಇದಕ್ಕೆ ಮಾನವ ಸಮಾಜವೂ ಹೊರತಲ್ಲ ಎಂದರು.ಹೆಣ್ಣು- ಗಂಡುಗೆಳೆರಡೂ ಸಂಸಾರ ಸಾಗರದಲ್ಲಿ ತಮ್ಮ ಜವಾಬ್ದಾರಿಯಿಂದ ಜೀವನದ ಪಯಣ ಸಾಗಿಸಿದರೆ ಬದುಕು ಯಶಸ್ವಿಯಾಗುತ್ತದೆ. ತಂದೆ ಕುಟುಂಬದ ಅಗತ್ಯತೆಗಳನ್ನು ಅರಿತು ಎಲ್ಲವನ್ನೂ ತಂದು ಕೊಡುತ್ತಾನೆ. ತಾಯಿ ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾಳೆ ಎಂದು ಹೇಳಿದರು.
ಪುಸ್ತಕದ ಭಾಷೆಯಿಂದ ಮಾತನಾಡಿದರೆ ಅಲ್ಲಿ ಕೇವಲ ಶಬ್ದಗಳ ಪ್ರತಿಫಲನವಿರುತ್ತದೆ. ಮಕ್ಕಳು ಮನದಾಳದಿಂದ ಮಾತನಾಡುತ್ತಿದ್ದಾರೆ. ಮಕ್ಕಳ ಚಿಂತನಾ ಲಹರಿ ಮತ್ತು ಭಾವನೆಗಳು ಮಾತುಗಳ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತಿವೆ. ಚಿಂತನೆಗಳ ಮೂಲಕ ಸಮಾಜದ ಬದಲಾವಣೆ ಸಾಧ್ಯವಿದೆ ಎಂದು ಹೇಳಿದರು.ಇದಕ್ಕೂ ಮುನ್ನ ಗುರುವಂದನೆ ಹಾಗೂ ಶಾಲಾ ಮಕ್ಕಳಿಂದ ತಮ್ಮ ತಂದೆ, ತಾಯಿಗಳಿಗೆ ಪಾದಪೂಜೆ ನಡೆಯಿತು. ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಪುರಸಭಾ ಸದಸ್ಯರಾದ ಕೆ.ಬಿ.ಮಹೇಶ್, ಕೆ.ಎಸ್.ಸಂತೋಷ್ ಕುಮಾರ್, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್, ಬಿಜಿಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಬ್ಯಾಲದಕೆರೆ ಪಾಪೇಗೌಡ, ಹಿರಿಯ ವಕೀಲ ಎಸ್.ಸಿ.ವಿಜಯಕುಮಾರ್, ಬಿ.ನಂಜಪ್ಪ ಇದ್ದರು.