ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ: ರೈತ ರವಿಕುಮಾರ್

| Published : Dec 15 2024, 02:03 AM IST

ಸಾರಾಂಶ

ತಾಲೂಕು ಆಂಧ್ರಪ್ರದೇಶ ಗಡಿಭಾಗವಾದ ಕೆಂತರ್ಲಟ್ಟಿಯಿಂದ ಶಿರಾವರೆಗೆ ರಾಷ್ಟ್ರೀಯ ಹೆದ್ದಾರಿ 544ಇ ಹಾದುಹೋಗಿದ್ದು, ಈ ರಸ್ತೆಗೆ ಜಮೀನು ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಸರ್ಕಾರ 1 ಗುಂಟೆಗೆ 4 ಲಕ್ಷ ಪರಿಹಾರ ನೀಡಬೇಕೆಂದು ಎಂದು ರೈತ ರವಿಕುಮಾರ್ ಒತ್ತಾಯಿಸಿದರು. ಶಿರಾದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು.

ರಸ್ತೆ ತಡೆದು ಪ್ರತಿಭಟನೆಕನ್ನಡಪ್ರಭ ವಾರ್ತೆ ಶಿರಾ ತಾಲೂಕು ಆಂಧ್ರಪ್ರದೇಶ ಗಡಿಭಾಗವಾದ ಕೆಂತರ್ಲಟ್ಟಿಯಿಂದ ಶಿರಾವರೆಗೆ ರಾಷ್ಟ್ರೀಯ ಹೆದ್ದಾರಿ 544ಇ ಹಾದುಹೋಗಿದ್ದು, ಈ ರಸ್ತೆಗೆ ಜಮೀನು ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಸರ್ಕಾರ 1 ಗುಂಟೆಗೆ 4 ಲಕ್ಷ ಪರಿಹಾರ ನೀಡಬೇಕೆಂದು ಎಂದು ರೈತ ರವಿಕುಮಾರ್ ಒತ್ತಾಯಿಸಿದರು.ತಾಲೂಕಿನ ಗಿಡಗನಹಳ್ಳಿ ಕ್ರಾಸ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ 544ಇ ರಸ್ತೆಗೆ ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರವು ಕೆಲವರಿಗೆ ಪರಿಹಾರ ನೀಡಿದೆ. ಇನ್ನೂ ಕೆಲವರಿಗೆ ಪರಿಹಾರ ನೀಡಿಲ್ಲ. ಶಿರಾ ಉಪನೋಂದಣಾಧಿಕಾರಿಗಳ ಕಚೇರಿಯ ದಾಖಲೆಯ ಪ್ರಕಾರ ಮದಲೂರು ಸರ್ವೇ ನಂಬರ್‌ಗೆ ಮಾರುಕಟ್ಟೆ ಮೌಲ್ಯ 1 ಗುಂಟೆಗೆ ₹98700 ಇದೆ. ನಗರಕ್ಕೆ ಸಮೀಪವಿರುವ ಕೊಟ್ಟ ಗ್ರಾಮದ ಸರ್ವೇ ನಂಬರ್‌ಗೆ 1 ಗುಂಟೆಗೆ ₹1.07 ಲಕ್ಷ ಇದೆ. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಇರುವ ಮಾರುಕಟ್ಟೆ ಮೌಲ್ಯದಂತೆ 1 ಗುಂಟೆಗೆ ₹98700 ದಂತೆ ನಾಲ್ಕು ಪಟ್ಟು ಪರಿಹಾರವಾಗಿ 1 ಗುಂಟೆಗೆ ₹4 ಲಕ್ಷ ಪರಿಹಾರ, ಕೊಟ್ಟ ಸರ್ವೇ ನಂಬರ್‌ಗೆ 1 ಗುಂಟೆಗೆ ₹6 ಲಕ್ಷ ಪರಿಹಾರ ನೀಡಿ ಕಾಮಗಾರಿ ಮಾಡಬೇಕು ಎಂದರು.

ಸರ್ಕಾರದವರು 1 ಗುಂಟೆಗೆ ಕೇವಲ ₹9761 ನೀಡುತ್ತಿದೆ. ಇದು ರೈತರಿಗೆ ಎಸಗುತ್ತಿರುವ ಅನ್ಯಾಯವಾಗಿದೆ. ತಾಲೂಕಿನ ಮದಲೂರು ಗ್ರಾಪಂ ಕೊಟ್ಟ, ಹೊನ್ನಗೊಂಡನಹಳ್ಳಿ ಗ್ರಾಪಂಗೆ ಸೇರಿದ 120 ರೈತರ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿ 544ಇಗೆ ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ ರೈತರ ಜಮೀನಿಗೆ ಮಾರುಕಟ್ಟೆ ಮೌಲ್ಯದ ಅನುಸಾರ ಪರಿಹಾರ ನೀಡಿಲ್ಲ. ಈ ಬಗ್ಗೆ ಈ ಭಾಗದ ರೈತರು ಹಲವಾರು ಭಾರಿ ಪ್ರತಿಭಟನೆ ಮಾಡಿದರೂ ಜಿಲ್ಲಾಧಿಕಾರಿ, ಶಾಸಕರಿಗೆ ಮನವಿ ಮಾಡಿದರೂ ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ತಹಸೀಲ್ದಾರ್, ಶಾಸಕರಾಗಲಿ ಯಾರೂ ಸಹ ಬಂದು ರೈತರ ಸಮಸ್ಯೆ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕೇವಲ ಮತ ಕೇಳಲು ಬರುವ ರಾಜಕಾರಣಿಗಳು ರೈತರ ಸಮಸ್ಯೆ ಕೇಳಲು ಏಕೆ ಬರುವುದಿಲ್ಲ. ಮುಂದಿನ ಗುರುವಾರದೊಳಗೆ ರೈತರ ಸಮಸ್ಯೆ ಪರಿಹರಿಸದಿದ್ದರೆ. ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು. ಜಮೀನು ಕಳೆದುಕೊಂಡು ರೈತ ನವೀನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 544ಇಕ್ಕೆ ಹಲವಾರು ಸಣ್ಣ ಹಿಡುವಳಿದಾರರ ರೈತರ ಜಮೀನುಗಳೇ ಸ್ವಾಧೀನವಾಗಿರುವುದು. ಮದಲೂರು ಕೆರೆಗೆ ನೀರು ಬಂದಿರುವ ಕಾರಣ ಈ ಭಾಗದ ರೈತರು ಕೊಳವೆ ಬಾವಿಗಳನ್ನು ಕೊರೆಸಿಕೊಂಡು ವ್ಯವಸಾಯ ಮಾಡುತ್ತಿದ್ದರು. ಆದರೆ ಈಗ ಇರುವ ಜಮೀನನ್ನು ರಸ್ತೆಗೆ ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದರು.

ಸರ್ಕಾರ ನಿಗದಿಪಡಿಸಿದ ಪರಿಹಾರ ಹಣವನ್ನು ಗುತ್ತಿಗೆದಾರರು, ಮಧ್ಯವರ್ತಿಗಳು ದುರ್ಬಳಕೆ ಮಾಡಿಕೊಂಡಿದ್ದು, ರೈತರಿಗೆ ಪರಿಹಾರ ನೀಡುತ್ತಿಲ್ಲ. ರೈತರನ್ನು ಎದರಿಸಿ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಕಾಮಗಾರಿ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ರೈತರ ಜಮೀನನ್ನು ವಶಪಡಿಸಿಕೊಂಡು ರೈತರ ಜೀವನಕ್ಕೂ ಕುತ್ತು ತಂದಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು ಸ್ಥಳಕ್ಕೆ ಬಂದು ರೈತರಿಗೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರೈತರಾದ ಪ್ರಕಾಶ, ನಂದಕುಮಾರ್, ರಾಜಣ್ಣ, ನಾಗೇಂದ್ರ, ಶಿವಣ್ಣ ಗೌಡ, ಮುದ್ದಣ್ಣ, ಶಿರಾಜಪ್ಪ, ಚಂದ್ರಪ್ಪ, ಯಾದವೇಂದ್ರ ಸೇರಿದಂಗೆ ನೂರಾರು ರೈತರು ಭಾಗವಹಿಸಿದ್ದರು.