ಸಾರಾಂಶ
ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿಎಸ್ ಪುರ ಹೋಬಳಿ ಕಲ್ಲೂರಿನಲ್ಲಿ ನಾಯಿಗಳ ಕಡಿತದಿಂದಾಗಿ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವುದು ವಿಷಾದನೀಯ ಸಂಗತಿ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿಎಸ್ ಪುರ ಹೋಬಳಿ ಕಲ್ಲೂರಿನಲ್ಲಿ ನಾಯಿಗಳ ಕಡಿತದಿಂದಾಗಿ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವುದು ವಿಷಾದನೀಯ ಸಂಗತಿ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದ್ದಾರೆ. ಚಿಕ್ಕೋನಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಲೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಪಂಗೆ ಆಗ್ರಹಿಸಿದರೂ ಸಹ ಪ್ರಯೋಜನವಾಗಿಲ್ಲ. ಕಲ್ಲೂರು ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಗಂಗಮ್ಮ ಎಂಬ ಮಹಿಳೆ ಸೇರಿದಂತೆ ಹತ್ತಾರು ಚಿಕ್ಕ ಮಕ್ಕಳ ಮೇಲೆ ಹುಚ್ಚು ನಾಯಿಗಳು ದಾಳಿ ಮಾಡಿವೆ. ಗಂಗಮ್ಮನ ಮುಖ, ಕುತ್ತಿಗೆ ಕೈಕಾಲುಗಳಿಗೆ ಕಡಿದು ಗಾಯಗೊಳಿಸಿವೆ. ಕೂಡಲೇ ಆಸ್ಪತ್ರೆ ದಾಖಲಿಸಿದ್ದರು ಸಹ ಸೂಕ್ತ ಚಿಕಿತ್ಸೆ ದೊರಕದೆ ಸಾವನ್ನಪ್ಪಿದ್ದಾರೆ. ಈ ಸಾವಿಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯೇ ನೇರ ಹೊಣೆಯಾಗಿದೆ ಎಂದು ದೂರಿದರು. ನಾಯಿ ಕಡಿತಕ್ಕೆ ಒಳಗಾಗಿ ಮೃತಪಟ್ಟ ಗಂಗಮ್ಮ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಅಲ್ಲದೇ ಆಸ್ಪತ್ರೆಗಳಲ್ಲಿ ನಾಯಿ ಕಡಿತಕ್ಕೆ ಸಂಬಂಧಿಸಿದ ಚುಚ್ಚುಮದ್ದನ್ನು ದಾಸ್ತಾನು ಮಾಡಬೇಕು. ಜನ ಸಾಮಾನ್ಯರ ಆರೋಗ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿರುವ ಜಿಲ್ಲಾಡಳಿತದ ಕಾರ್ಯ ವೈಖರಿಯನ್ನು ಖಂಡಿನೀಯ. ಹುಚ್ಚು ನಾಯಿ ಕಡಿತದ ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಆರೋಗ್ಯ ಇಲಾಖೆ ತಲುಪಿರುವುದು ಸರ್ಕಾರ ದಿವಾಳಿಯತ್ತ ಸಾಗುತ್ತಿದೆ ಎಂದು ಸಾಬೀತಾಗಿದೆ ಎಂದರು.ಜಿಲ್ಲಾಡಳಿತ, ತಾಲೂಕು ಆಡಳಿತ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಜಿಲ್ಲಾಡಳಿತ ಜನರ ಸಾವಿನ ಜೊತೆ ಚಲ್ಲಾಟವಾಡುತ್ತಿದೆ. ಬಡವರ ಜನ ಸಾಮಾನ್ಯರ ಸಾವಿಗೆ ಬೆಲೆ ಇಲ್ಲದಂತಾಗಿದೆ. ಜಿಪಂ ಸಿಇಒ ಪ್ರಭು ಜನರ ರಕ್ಷಣೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳುತ್ತಿಲ್ಲ. ನರ ಭಕ್ಷಕರಾಗಿರುವ ನೂರಾರು ಹುಚ್ಚು ನಾಯಿಗಳು ಕಲ್ಲೂರು ಗ್ರಾಮದಲ್ಲಿ ಪ್ರತಿದಿನ ಹಲವು ಮಕ್ಕಳು, ಮಹಿಳೆಯರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸುತ್ತಿವೆ ಎಂದು ಹೇಳಿದರು.
ಶಾಲಾ ಮಕ್ಕಳು ಜೀವಭಯದಿಂದ ಶಾಲೆಗೆ ತೆರಳಬೇಕಿದೆ. ಕೂಡಲೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ತುರ್ತು ಕ್ರಮವಹಿಸಬೇಕು. ನಾಯಿ ಕಡಿತದಿಂದ ಸಾವಿಗೀಡಾದ ಮಹಿಳೆಯ ಸಾವಿನ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು. ನಾಯಿ ಕಡಿತ ಔಷಧಿ ನೀಡದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ನಾಯಿ ಕಡಿತದಿಂದ ಅನಾಹುತವಾದಲ್ಲಿ ಮರುಕಳಿಸಿದರೆ ಗಾಯಾಳುಗಳೊಂದಿಗೆ ಜಿಲ್ಲಾಧಿಕಾರಿಗಳ ಮನೆ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷ ಮೃತ್ಯಂಜಯ, ಕಾರ್ಯದರ್ಶಿ ಪ್ರಕಾಶ್ ಮುಖಂಡರಾದ ವೀರೇಂದ್ರ ಪಾಟೀಲ್, ವಿ.ಬಿ.ಸುರೇಶ್, ಚಂದ್ರಯ್ಯ, ಯೋಗಾನಂದ, ಸೋಮಶೇಖರ್, ಸುರೇಶ್ ಇದ್ದರು.