ಸಾರಾಂಶ
ವಿವಿಧ ಖಾಸಗಿ ಕಂಪನಿಗಳಲ್ಲಿ ಹಣ ತೊಡಗಿಸಿ ವಂಚಿತರಾದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಸೆ.1ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಧು ಎಚ್.ಎಂ ಹರೋನಹಳ್ಳಿ ತಿಳಿಸಿದರು.
ದಾವಣಗೆರೆ : ವಿವಿಧ ಖಾಸಗಿ ಕಂಪನಿಗಳಲ್ಲಿ ಹಣ ತೊಡಗಿಸಿ ವಂಚಿತರಾದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಸೆ.1ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಗ್ರಹ ನಡೆಸಲಾಗುವುದು ಎಂದು ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ಸಂಘಟನೆಯ ಉಪಾಧ್ಯಕ್ಷ ಮಧು ಎಚ್.ಎಂ ಹರೋನಹಳ್ಳಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗ್ರಿ ಗೋಲ್ಡ್, ಪಿಎಸಿಎಲ್, ಸಮೃದ್ಧ ಜೀವನ್, ಅಚಿವರ್ಸ್, ಅಗ್ರಿ ಇಂಡಿಯಾ, ಇ-ಸ್ಟೋರ್ ಇಂಡಿಯಾ, ಹಿಂದೂಸ್ಥಾನ್ ಗುರುಟೀಕ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಹಣತೊಡಗಿಸಿರುವವರಿಗೆ ಈ ಕಂಪನಿಗಳು ಲಕ್ಷಾಂತರ ರು. ವಂಚಿಸಿವೆ. ಇದರಿಂದ ಅನೇಕರು ಹಣ ಕಳೆದುಕೊಂಡು ನೊಂದಿದ್ದಾರೆ. ಸೆಬಿ ಆದೇಶದಂತೆ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರಗಳು ವಂಚನೆ ಸಂತ್ರಸ್ತರಿಗೆ ಇನ್ನೂ ಹಣ ಕೊಡಿಸಿಲ್ಲ. ಕೂಡಲೇ ಹಣ ಪಾವತಿಸಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ವಿವಿಧ ಕಂಪನಿಗಳಿಂದ ವಂಚನೆಗೆ ಒಳಗಾದ ಗ್ರಾಹಕರಿದ್ದೇವೆ. ರಾಜ್ಯದಲ್ಲಿ ಅಗ್ರಿ ಗೋಲ್ಡ್ ಒಂದು ಕಂಪನಿಯ ವಂಚನೆಯ ಮೊತ್ತವೇ ಸರಿ ಸುಮಾರು 3,000 ಕೋಟಿಯಷ್ಟಿದೆ. ಸಂತ್ರಸ್ತರು ದಾಖಲೆ ಸಮೇತ ಡಿಸಿ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ಮನವಿ ಸಲ್ಲಿಸಲು ವಿಶೇಷ ಆಡಳಿತ ಅವಕಾಶ ಕಲ್ಪಿಸಿದ್ದರೂ ಕಂಪನಿಗಳಿಂದ ಹಣ ಮರಳಿಸುವ ಕೆಲಸ ಆಗಿಲ್ಲ. ಆದ್ದರಿಂದ ರಾಜ್ಯದ ಜಿಲ್ಲೆಗಳಲ್ಲಿ ಸೇರಿದಂತೆ ರಾಷ್ಟ್ರವ್ಯಾಪಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರಿಬಸಪ್ಪ, ಸಿದ್ದಪ್ಪ, ಚಂದ್ರಶೇಖರ್, ದಾಗಿನಕಟ್ಟೆ ಜಿ.ಎಸ್ ನಾಗರಾಜು, ಮಂಜುನಾಥ್ ಉಪಸ್ಥಿತರಿದ್ದರು.