ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಾಳೆಕಾಯಿಗೆ ವರ್ತಕರು ಸ್ಪರ್ಧಾತ್ಮಕ ಬೆಲೆಯನ್ನು ನೀಡಬೇಕು. ಪರವಾನಗಿ ಇಲ್ಲದ ಬಾಳೆಕಾಯಿ ವರ್ತಕರಿಗೆ ಕಡಿವಾಣ ಹಾಕಬೇಕು ಎಂದು ಎಪಿಎಂಸಿ ಅಧ್ಯಕ್ಷ ಸೋಮೇಶ್ (ಎಚ್.ಎನ್. ಮಹದೇವಸ್ವಾಮಿ) ತಿಳಿಸಿದರು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಪರವಾನಿಗೆ ಪಡೆದ ಬಾಳೆಕಾಯಿ ಉತ್ಪನ್ನ ವ್ಯವಹಾರ ನಡೆಸುತ್ತಿರುವ ವರ್ತಕರ ಸಭೆಯಲ್ಲಿ ಮಾತನಾಡಿದರು. ಬಾಳೆ ಬೆಳೆದ ರೈತರು ಎಪಿಎಂಸಿಯಲ್ಲಿ ಗುಣಮಟ್ಟಕ್ಕೆ ತಕ್ಕಂತೆ ಉತ್ತಮ ದರ ದೊರೆಯುತ್ತದೆ ಎಂಬ ಉದ್ದೇಶದಿಂದ ಬರುತ್ತಾರೆ. ಅಂತಹ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪರವಾನಗಿ ಹೊಂದಿರುವ ಬಾಳೆ ಕಾಯಿ ವರ್ತಕರು ಮಾತ್ರ ಹರಾಜಿನಲ್ಲಿ ಭಾಗವಹಿಸುವಂತೆ ಸೂಚನೆ ನೀಡಬೇಕು. ಹೊರ ರಾಜ್ಯ ವರ್ತಕರಿಗೆ ಅವಕಾಶ ನೀಡಬೇಡಿ ಎಂದರು.
ಚಾಮರಾಜನಗರ ಸಮಿತಿ ವ್ಯಾಪ್ತಿಯಲ್ಲಿ ಬಾಳೆಕಾಯಿ ಉತ್ಪನ್ನಕ್ಕೆ ೧ನೇ ದರ್ಜೆ, ೨ ನೇ ದರ್ಜೆ ಹಾಗೂ ಪುಡಿ ಎಂದು ದರ ನಿಗದಿ ಪಡಿಸುತ್ತಿದ್ದು, ೧ನೇ ದರ್ಜೆ ಹಾಗೂ ೨ನೇ ದರ್ಜೆ ದರಗಳಲ್ಲಿ ತುಂಬಾ ಅಂತರವಿದ್ದು ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಎಲ್ಲಾ ವರ್ತಕರು ಬಾಳೆ ಬೆಳೆದ ರೈತರಿಗೆ ನ್ಯಾಯಯುತವಾದ ಬೆಲೆ ನೀಡಬೇಕೆಂದು ವರ್ತಕರಿಗೆ ಅಧ್ಯಕ್ಷರು ಮನವಿ ಮಾಡಿದರು.ಬಾಳೆಕಾಯಿ ವರ್ತಕರು ಮಾತನಾಡಿ, ಹೊರ ರಾಜ್ಯದಿಂದ ಬರುವ ವರ್ತಕರು ಹಾಗೂ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿರುವ ವರ್ತಕರು ಈ ರೀತಿ ಮಾಡುತ್ತಿದ್ದಾರೆ. ಈ ವರ್ತಕರಿಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ವರ್ತಕರ ಪ್ರತಿನಿಧಿ ವೆಂಕಟ್‌ರಾವ್ ಮಾತನಾಡಿ, ನಮ್ಮ ಸಮಿತಿಯ ವ್ಯಾಪ್ತಿಯ ವರ್ತಕರು ಇದೂವರೆವಿಗೂ ಯಾವುದೇ ರೈತರಿಗೆ ಹಣ ನೀಡದೆ ಮೋಸ ಮಾಡಿರುವುದಿಲ್ಲ. ಹೊರ ರಾಜ್ಯದಿಂದ ಬರುವ ವರ್ತಕರು ಪರವಾನಗಿ ಇಲ್ಲದ ವರ್ತಕರು ಬೆಲೆಯಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಂಡು ಸ್ಥಳೀಯ ವರ್ತಕರಿಗೆ ಪರವಾನಗಿ ನೀಡಬೇಕು. ಎಲ್ಲಾ ವರ್ತಕರು ಗುಣಮಟ್ಟದ ಆಧಾರದ ಮೇಲೆ ಸೂಕ್ತ ದರವನ್ನು ನೀಡಬೇಕೆಂದು ಸೂಚಿಸಿದರು.ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಬಸವಣ್ಣ ಮಾತನಾಡಿ, ಪರವಾನಗಿ ಇಲ್ಲದೆ ವ್ಯಾಪಾರ ಮಾಡುತ್ತಿರುವ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವದಾಗಿ ಸಭೆಗೆ ತಿಳಿಸಿದರು. ಇನ್ನು ಮುಂದೆ ಜಿಲ್ಲೆಯ ಅಂತರರಾಜ್ಯ ಚೆಕ್ ಪೋಸ್ಟ್ ಕಟ್ಟು ನಿಟ್ಟಿ ತಪಾಸಣೆ ಕೈಗೊಂಡು ಹೊರ ರಾಜ್ಯದಿಂದ ಬರುವ ವರ್ತಕರು ಕಡಿವಾಣ ಹಾಕುವುದಾಗಿ ತಿಳಿಸಿದರು.
ತೋಟಗಾರಿಕೆಯ ಇಲಾಖೆಯ ಅಧಿಕಾರಿ ರಾಜೇಶ್, ಎಪಿಎಂಸಿ ಕಾರ್ಯದರ್ಶಿ ಜಗದೀಶ್, ಇಲಾಖೆಯ ಅಧಿಕಾರಿಗಳು ಇದ್ದರು.