ಓದಿನ ಜತೆಗೆ ಗ್ರಾಮೀಣ ಬದುಕಿನ ಅನುಭವವನ್ನು ಕಲಿತು ಸಾಮಾಜಿಕ ಪ್ರಜ್ಞೆ ಮೂಡಿಸಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ.
ಅಳ್ನಾವರ:
ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲದೆ ಅದರೊಟ್ಟಿಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ಶಿಕ್ಷಣವಾಗಲು ಸಾಧ್ಯವಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ಹೇಳಿದರು.ಸಮೀಪದ ಹುಲಿಕೇರಿ ಗ್ರಾಮದಲ್ಲಿ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಓದಿನ ಜತೆಗೆ ಗ್ರಾಮೀಣ ಬದುಕಿನ ಅನುಭವವನ್ನು ಕಲಿತು ಸಾಮಾಜಿಕ ಪ್ರಜ್ಞೆ ಮೂಡಿಸಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ ಎಂದರು.
ಭಾರತದಲ್ಲಿ ವಿವಿಧ ಬಗೆಯ ಸಂಸ್ಕೃತಿಗಳು ಅಡಗಿದ್ದು ಮಕ್ಕಳಿಗೆ ಅವುಗಳ ಪರಿಚಯ ಮಾಡಿಕೊಡುವಂತಹ ಕಾರ್ಯವಾಗಬೇಕಾಗಿದೆ. ಜ್ಞಾನವಂತರಾದ ಮೇಲೆ ಊರಿನ ಋಣ ತಿರಿಸುವ ಕರ್ತವ್ಯ ಎಲ್ಲರದ್ದಾಗಬೇಕು. ಮುಂದೊಂದು ದಿನ ಮಾಯವಾಗಬಲ್ಲಂತಹ ಹಳ್ಳಿಗಳ ಮಹತ್ವದ ಬಗ್ಗೆ ಪರಿಕಲ್ಪನೆ ಎಲ್ಲರಲ್ಲಿ ಮೂಡಿದಾಗ ಮಾತ್ರ ಗ್ರಾಮೀಣ ಪರಿಸರವನ್ನು ಅನುಭವಿಸಲು ಸಾಧ್ಯವಿದೆ ಎಂದು ಹೇಳಿದ ಅವರು, ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ಸಂಸ್ಕಾರ, ಮಾನವೀಯ ಮೌಲ್ಯವನ್ನು ಕಲಿಸುವ ಅವಶ್ಯಕತೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.ಡಾ. ಸುರೇಶ ದೊಡಮನಿ ಪ್ರಾಸ್ತಾವಿಕ ಮಾತನಾಡಿದರು. ಎನ್‌ಎಸ್‌ಎಸ್ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಹುಲಿಕೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ ಇನಾಮದಾರ ಅಧ್ಯಕ್ಷತೆ ವಹಿಸಿದ್ದರು. ಪಿಕಾರ್ಡ್ ಬ್ಯಾಂಕ್ ನಿರ್ದೆಶಕ ಯಲ್ಲಪ್ಪ ಬೆಳಗಾವಿ, ಶಿವಾಜಿ ಡೊಳ್ಳಿನ, ರಮೇಶ ಕಿತ್ತೂರ, ರಸೂಲ ಡಂಕೆವಾಲೆ, ಗುರುರಾಜ ನರಗುಂದ, ಮಲ್ಲಿಕ ಅಂಚಿ, ಫಕೀರಪ್ಪ ನಂದಿ, ಶಿವಯೋಗಿ ಹಾವೇರಿ, ಅಲ್ಲಿಸಾಬ್ ನದಾಫ್ ಸೇರಿದಂತೆ ಇತರರು ಇದ್ದರು.
2ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಬಸವರಾಜ ಇನಾಮದಾರ ವಹಿಸಿದ್ದರು. ಶಿವಾನಂದ ನರಗುಂದ, ರಾಜೇಸಾಬ್ ಗುಳ್ಳದಕೊಪ್ಪ, ಬಿಷ್ಟಪ್ಪ ತಾರೋಳ್ಳಿ, ಮಲ್ಲಿಕಾರ್ಜುನ ಕಲ್ಲೂರ ಇದ್ದರು. ವಿನೋದ ಕಮ್ಮಾರ ಅವರ ಕಲಾ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತ್ತು.