ದಲಿತ ನಾಯಕರಿಗೆ ಅವಕಾಶ‌ ನೀಡಿ: ಬಿ.ವಿ. ಜಯರಾಂ

| Published : Nov 07 2025, 01:45 AM IST

ಸಾರಾಂಶ

ಕಾಂಗ್ರೆಸ್ ಪಕ್ಷ ನೆಲಕಚ್ಚಿದ ದಿನದಲ್ಲಿ ಗೃಹಸಚಿವರಾದ ಜಿ. ಪರಮೇಶ್ವರ್ ರವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇ ತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಗಡಿ

ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾದರೆ ಕಾಂಗ್ರೆಸ್ ಹೈಕಮಾಂಡ್ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನದ ನೀಡಬೇಕು ಎಂದು ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ. ಜಯರಾಂ ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಇನ್ನೂ ದಲಿತ ನಾಯಕರಿಗೆ ರಾಜಕೀಯವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಕಾಂಗ್ರೆಸ್ ಪಕ್ಷ ನೆಲಕಚ್ಚಿದ ದಿನದಲ್ಲಿ ಗೃಹಸಚಿವರಾದ ಜಿ. ಪರಮೇಶ್ವರ್ ರವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇ ತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಸುಮಾರು ಎಂಟು ವರ್ಷಗಳ ಕಾಲ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ಡಾ.ಜಿ ಪರಮೇಶ್ವರ್ ಅವರಿಗೊಂದು ಅವಕಾಶ ಕಲ್ಪಿಸಿ ಕೊಡಬಹುದು.

2013 ರಿಂದ 2023ರ ವರೆಗೆ ದಲಿತ ನಾಯಕರಿಗೆ ಸಿಎಂ ಸ್ಥಾನ ಕಲ್ಪಿಸುವಂತೆ ಹೈಕಮಾಂಡ್ ಅವರಲ್ಲಿ ಒತ್ತಾಯದ ಕೂಗು ಕೇಳಿ ಬರುತ್ತಿದೆ. ಈ ಭಾರಿ ಸಿಎಂ ಸ್ಥಾನ ಬದಲಾವಣೆ ಆಗಿದ್ದೆ ಆದರೆ ಕಾಂಗ್ರೆಸ್ ಪಕ್ಷದಲ್ಲಿ ಐದು ಜನ ದಲಿತ ನಾಯಕರಿದ್ದಾರೆ. ಎಐಸಿಸಿ ಅಧ್ಯಕ್ಷ ಹಾಗೂ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ. ಎಚ್.ಸಿ. ಮಹದೇವಪ್ಪ ಕೆ.ಎಚ್. ಮುನಿಯಪ್ಪ ಸತೀಶ್ ಜಾರಕಿಹೊಳಿ ಹಾಗೂ ಡಾ. ಜಿ ಪರಮೇಶ್ವರ್ ಈ ಐವರಲ್ಲಿ ಯಾರಿಗಾದರೂ ಒಬ್ಬರಿಗೆ ಸಿಎಂ ಸ್ಥಾನ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸುತ್ತೇವೆ. ಹಾಗೊಂದು ವೇಳೆ ಕೊಡದಿದ್ದರೆ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯಾದ್ಯಂತ ದಲಿತರನ್ನು ಸಂಘಟಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾಲ ದೂರವಿಲ್ಲ. ಇದಕ್ಕೆಲ್ಲ ಅವಕಾಶ ಕೊಡದಂತೆ ದಕ್ಷ ಶುದ್ಧ ಹಸ್ತರಾದ ಸಿಎಂ ಸ್ಥಾನ ಕೊಡುವಂತೆ ಮನವಿ ಮಾಡಿ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.ಸಮೃದ್ಧಿ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಶಿವಶಂಕರ್ ಮಾತನಾಡಿ, ಈಗಿರುವ ಸಿಎಂ ಸಿದ್ದರಾಮಯ್ಯ ಅವರ ಸ್ಥಾನ ಬದಲಾವಣೆ ನಮ್ಮ ಉದ್ದೇಶವಲ್ಲ. ಆದರೆ ರಾಜ್ಯಾದ್ಯಂತ ಸಿಎಂ ಬದಲಾವಣೆಯ ಕೂಗು ಕೇಳಿ ಬರುತ್ತಿರುವುದರಿಂದ ಈ ಬಾರಿಯಾದರೂ ದಲಿತ ದಕ್ಷ ರಾಜಕಾರಣಿ ಗೆ ಸಿಎಂ ಸ್ಥಾನ ನೀಡಬೇಕೆಂದು ದಲಿತ ಮುಖಂಡರು ಒಕ್ಕರಳಿನಿಂದ ಹೈಕಮಾಂಡ್ ಅವರಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು.ಡಾ.ಜಿ. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ನಡಿಗೆ ಜನರ ಕಡೆಗೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರ 35 ವರ್ಷಗಳ ರಾಜಕೀಯ ಜೀವನ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದೆ ಅವರಿಗೊಂದು ಅವಕಾಶ ಕೊಡುವುದು ಕಾಂಗ್ರೆಸ್ ಹೈಕಮಾಂಡ್‌ನ ಗುರುತರ ಜವಾಬ್ದಾರಿಯಾಗಿದೆ ಎಂದರು.ಇದೇ ವೇಳೆ ಯುವಕವಿ ತೋಟದ ಮನೆ ಗಿರೀಶ್ ಮಾತನಾಡಿದರು. ಕುದೂರು ಬ್ಲಾಕ್ ಎಸ್ಸಿ,ಎಸ್ಟಿ ಅಧ್ಯಕ್ಷ ರವಿಕುಮಾರ್ ರಾಮನಗರದ ಚೆಲುವರಾಜು, ಜಿ. ನರಸಿಂಹಮೂರ್ತಿ, ಚಿಕ್ಕಳ್ಳಿ ಸುರೇಶ್, ಸುಗ್ಗನಹಳ್ಳಿ ಕೃಷ್ಣಮೂರ್ತಿ, ಬೀಚನಹಳ್ಳಿ ಸುರೇಶ್, ನಾಗರಾಜು, ರವಿಶಂಕರ್ ಸೇರಿದಂತೆ ಇತರರು ಜತೆಯಲ್ಲಿ ಇದ್ದರು.