ದಾವಣಗೆರೆ ಲೋಕಸಭೆ ಟಿಕೆಟ್‌ ಸ್ಥಳೀಯರಿಗೆ ನೀಡಿ: ಎಂ.ಪಿ.ರೇಣುಕಾಚಾರ್ಯ

| Published : Jan 17 2024, 01:47 AM IST

ದಾವಣಗೆರೆ ಲೋಕಸಭೆ ಟಿಕೆಟ್‌ ಸ್ಥಳೀಯರಿಗೆ ನೀಡಿ: ಎಂ.ಪಿ.ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಹಾಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಈಗಾಗಲೇ ನಾಲ್ಕು ಬಾರಿ ಲೋಕಸಭೆಯಲ್ಲಿ ದಾವಣಗೆರೆ ಪ್ರತಿನಿಧಿಸಿದ್ದಾರೆ. ಈ ಬಾರಿ ಚುನಾವಣೆಗೆ ದಾವಣಗೆರೆ ಜಿಲ್ಲೆಯವರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮದಷ್ಟೇ ಅಲ್ಲ, ನಮ್ಮೆಲ್ಲಾ ಕಾರ್ಯಕರ್ತರದ್ದು, ಮತದಾರರದ್ದೂ ಆಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಸ್ಥಳೀಯರಿಗೆ ನೀಡುವಂತೆ ಕಾರ್ಯಕರ್ತರು, ಮತದಾರರ ಅಪೇಕ್ಷೆ ಇದ್ದು, ಸಮೀಕ್ಷೆ ಕೈಗೊಂಡು ಯಾರ ಹೆಸರು ಬರುತ್ತದೋ ಅಂತಹವರ ಪರ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ನಗರದ ಕೆಬಿ ಬಡಾವಣೆಯಲ್ಲಿ ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಜನ್ಮದಿನದ ಅಂಗವಾಗಿ ನಿವಾಸಕ್ಕೆ ಭೇಟಿ ನೀಡಿ, ಜನ್ಮದಿನದ ಶುಭಾರೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಹಾಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಈಗಾಗಲೇ ನಾಲ್ಕು ಬಾರಿ ಲೋಕಸಭೆಯಲ್ಲಿ ದಾವಣಗೆರೆ ಪ್ರತಿನಿಧಿಸಿದ್ದಾರೆ. ಈ ಬಾರಿ ಚುನಾವಣೆಗೆ ದಾವಣಗೆರೆ ಜಿಲ್ಲೆಯವರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮದಷ್ಟೇ ಅಲ್ಲ, ನಮ್ಮೆಲ್ಲಾ ಕಾರ್ಯಕರ್ತರದ್ದು, ಮತದಾರರದ್ದೂ ಆಗಿದೆ ಎಂದು ತಿಳಿಸಿದರು.

ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಬೇಕೆಂದು ಭಾರತವೂ ಸೇರಿ ಇಡೀ ವಿಶ್ವವೇ ಬಯಸಿದೆ. ಈ ನಿಟ್ಟಿನಲ್ಲಿ ರಾಜ್ಯದಿಂದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿ, 28 ಸಂಸದರ ಮೋದಿಯವರಿಗೆ ಕಾಣಿಕೆ ನೀಡುವ ನಿರ್ಧಾರವನ್ನು ನಾಯಕರಾದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಡಿದ್ದಾರೆ. ದಾವಣಗೆರೆಯಿಂದ ನಾವೂ ಬಿಜೆಪಿ ಸಂಸದರನ್ನೇ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ಜೊತೆಗೆ ಜೆಡಿಎಸ್‌ ಒಟ್ಟಾಗಿ ಹೋಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಷ್ಟ್ರಮಟ್ಟದಲ್ಲಿ ಆಗಿದೆ. ಸೀಟು ಎಷ್ಟು ಕೊಡುತ್ತಾರೆಂದು ಹೇಳಲು ನಾನು ಯಾರು? ಸಾಮಾನ್ಯ ಕಾರ್ಯಕರ್ತ ನಾನು. ಬಿಜೆಪಿ, ಜೆಡಿಎಸ್ ಒಟ್ಟಾಗಿ ಹೋಗಲು ಕೇವಲ ಸೀಟು ಹೊಂದಾಣಿಕೆ ಮಾತ್ರವಲ್ಲ, ಉಭಯ ಪಕ್ಷಗಳ ಕಾರ್ಯಕರ್ತರ ಭಿನ್ನಾಭಿಪ್ರಾಯ, ಸಂಘರ್ಷ ಮರೆಯಾಗಬೇಕು. ಸಾಮರಸ್ಯರಿಂದ 28ಕ್ಕೆ 28 ಕ್ಷೇತ್ರ ಗೆಲ್ಲಲ್ಲಿದ್ದು, ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆಗೆ ಮುನ್ನ ಅಥವಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬುದು ನೀವೇ ಕಾದು ನೋಡಿ ಎಂದು ರೇಣುಕಾಚಾರ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜನ್ಮದಿನ ಆಚರಿಸಿಕೊಂಡ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ರಾಜಶೇಖರ ನಾಗಪ್ಪ, ಮುಖಂಡರಾದ ಪಿ.ಸಿ.ಶ್ರೀನಿವಾಸ ಭಟ್‌, ಟಿ.ಶ್ರೀನಿವಾಸ ದಾಸಕರಿಯಪ್ಪ, ಡಾ.ಟಿ.ಜಿ.ರವಿಕುಮಾರ, ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಜಿ.ಎಸ್.ಶ್ಯಾಮ್ ಮಾಯಕೊಂಡ, ಎಚ್.ಸಿ.ಮಹೇಶ ಪಲ್ಲಾಗಟ್ಟೆ, ಅತಿಥ್ ಅಂಬರಕರ್‌, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ಮಂಜಾನಾಯ್ಕ, ಎಂ.ಪಿ.ಕೃಷ್ಣಮೂರ್ತಿ ಪವಾರ್‌, ರಾಜು ನೀಲಗುಂದ, ಆರ್.ಎಲ್‌.ಶಿವಪ್ರಕಾಶ, ಧನುಷ್ ರೆಡ್ಡಿ, ಟಿಂಕರ್ ಮಂಜಣ್ಣ, ರಾಜು ವೀರಣ್ಣ, ಕೊಟ್ರೇಶ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ್ ಇತರರು ಇದ್ದರು. ದಿನವಿಡೀ ಎಸ್.ವಿ.ರಾಮಚಂದ್ರ, ದಂಪತಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಜನತೆ ಅಭಿನಂದಿಸಿದರು. ಕಾಂಗ್ರೆಸ್ ಸರ್ಕಾರ ಶೀಘ್ರ ಪತನ

ಸುಳ್ಳು ಭರವಸೆ, ಅಲ್ಪಸಂಖ್ಯಾತರ ಜಪ ಮಾಡುವ ಕಾಂಗ್ರೆಸ್‌ಗೆ ರಾಮನ ಜಪ ಮಾಡುವಂತೆ ಹೇಳಿದರೆ, ಅಲ್ಲಾ, ಅಲ್ಲಾ, ಅಲ್ಲಾ... ಅಂತಾರೆ. ನಾವು ಅಲ್ಲಾನ ವಿರೋಧಿಗಳಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಶ್ರೀರಾಮಚಂದ್ರನ ಕರ ಸೇವಕರು, ರೈತರು, ಮಹಿಳೆಯರ ಶಾಪ ತಟ್ಟಲಿದ್ದು, ಶೀಘ್ರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರಲ್ಲಿ ಸಾಮರಸ್ಯ ಅಗತ್ಯ

ಜೆಡಿಎಸ್ ಕೇಳುವ ಕ್ಷೇತ್ರದ ವಿಚಾರದಲ್ಲಿ ನಮ್ಮ ರಾಷ್ಟ್ರೀಯ ನಾಯಕರ ನಿರ್ಧಾರವೇ ಅಂತಿಮ. ಜೆಡಿಎಸ್‌ನವರು ದಾವಣಗೆರೆ ಕೇಳುತ್ತಾರೋ, ತುಮಕೂರು ಕ್ಷೇತ್ರ ಕೇಳ್ತಾರೋ, ಬೆಂಗಳೂರು ಉತ್ತರ ಕೇಳ್ತಾರೋ, ಮಂಡ್ಯ, ಮೈಸೂರು ಕೇಳುತ್ತಾರೋ ಅದು ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ನಾವು ಹೇಳುವುದು ಕಾರ್ಯಕರ್ತರ ಮನಸ್ಸು ಸಾಮರಸ್ಯದಿಂದ ಉಭಯ ಪಕ್ಷದವರು ಸೇರಿಕೊಂಡು, ಬಿಜೆಪಿ 28 ಕ್ಷೇತ್ರ ಗೆಲ್ಲುತ್ತೇವೆ. ಕಾಂಗ್ರೆಸ್ ನೇತೃತ್ವದ 28 ಪಕ್ಷಗಳ ಮೈತ್ರಿಕೂಟ ಇಂಡಿಯಾವೂ ಚುನಾವಣೆಯಲ್ಲಿ ಯಶಸ್ವಿಯಾಗಲ್ಲ ಎಂದು ರೇಣುಕಾಚಾರ್ಯ ಟೀಕಿಸಿದರು...........