ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರೆ ಬಹುಸಂಖ್ಯಾತರಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ದಶಕದಿಂದಲೂ ಅಹಿಂದ ವರ್ಗಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ.ಈಗಲಾದರೂ ಬರುವ ಉಪಚುನಾವಣೆಯಲ್ಲಿ ಅಹಿಂದ ವರ್ಗಕ್ಕೆ ಕಾಂಗ್ರೆಸ್‌-ಬಿಜೆಪಿ ಟಿಕೆಟ್ ನೀಡಲಿ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರೆ ಬಹುಸಂಖ್ಯಾತರಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ದಶಕದಿಂದಲೂ ಅಹಿಂದ ವರ್ಗಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ.ಈಗಲಾದರೂ ಬರುವ ಉಪಚುನಾವಣೆಯಲ್ಲಿ ಅಹಿಂದ ವರ್ಗಕ್ಕೆ ಕಾಂಗ್ರೆಸ್‌-ಬಿಜೆಪಿ ಟಿಕೆಟ್ ನೀಡಲಿ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸೂಕ್ತ ರಂಗಮಂದಿರವಾಗಲೀ, ಜನರಿಗೆ ಅಗತ್ಯವಾದ ಯಾವುದೂ ಇಲ್ಲವಾಗಿದೆ. ಜಿಲ್ಲೆ ಅಭಿವೃದ್ಧಿಪಡಿಸದೇ, ತಮ್ಮ ವ್ಯವಹಾರ, ಉದ್ಯಮ ಉಳಿಸಿಕೊಳ್ಳುವವರಿಗೆ ಅಧಿಕಾರ ಬೇಕು. ಅಂತಹವವರಿಗೆ ಪಕ್ಷಗಳೂ ಟಿಕೆಟ್ ನೀಡುತ್ತಿವೆ. ಇಂತಹವರಿಂದಾಗಿ ಜಿಲ್ಲೆ ಅಭಿವೃದ್ಧಿ ಕಂಡಿಲ್ಲ ಎಂದರು.

ದಕ್ಷಿಣ ಕ್ಷೇತ್ರದಲ್ಲಿ 2.31 ಲಕ್ಷ ಮತದಾರರಿದ್ದು, ಈ ಪೈಕಿ 1.85 ಲಕ್ಷ ಮತದಾರರು ಅಹಿಂದ ವರ್ಗದವರು. ಮುಸ್ಲಿಂ ಬಾಹುಳ್ಯದ ಕ್ಷೇತ್ರ ಇದಾಗಿದೆ. ದಲಿತರು, ಕುರುಬ, ಉಪ್ಪಾರ, ನಾಯಕ ಹೀಗೆ ಹಿಂದುಳಿದ ವರ್ಗದವರು ಬರುತ್ತಾರೆ. ಹೀಗಿದ್ದರೂ ಕಾಂಗ್ರೆಸ್, ಬಿಜೆಪಿಯಿಂದ ಅಹಿಂದ ವರ್ಗಕ್ಕೆ ಟಿಕೆಟ್ ನೀಡಿಲ್ಲ.ಉಭಯ ಪಕ್ಷಕ್ಕೆ ಮುಸ್ಲಿಮರಲ್ಲಿ ಸೂಕ್ತರು ಸಿಗದಿದ್ದರೆ ಹಿಂದುಳಿದವರು, ದಲಿತರಲ್ಲಿ ಸೂಕ್ತರಿಗೆ ಟಿಕೆಟ್ ಕೊಡಲಿ ಎಂದು ತಿಳಿಸಿದರು.

ಉಪಚುನಾವಣೆ ಟಿಕೆಟ್‌ಗಾಗಿ ನಾನು ಯಾವುದೇ ಪಕ್ಷ, ನಾಯಕರನ್ನೂ ಭೇಟಿ ಮಾಡಿಲ್ಲ, ಯಾರ ಮನೆ ಬಾಗಿಲಿಗೂ ಹೋಗಿಲ್ಲ. ದಕ್ಷಿಣ ಉಪ ಚುನಾವಣೆಗೆ ಕಾಂಗ್ರೆಸ್ಸಾಗಲೀ, ಬಿಜೆಪಿಯಾಗಲೀ ಟಿಕೆಟ್ ನೀಡಿದರೆ ಖಂಡಿತಾ ಸ್ಪರ್ಧಿಸುತ್ತೇನೆ. ಅಭಿವೃದ್ಧಿ ಕಾರ್ಯ, ಜನಪರ ಕೆಲಸ ಮಾಡಲು ಇಂದು ರಾಜಕೀಯ ಅಧಿಕಾರ ಅತ್ಯಗತ್ಯ. ಯಾವುದೇ ಪಕ್ಷಕ್ಕೆ ನಾನು ಸೂಕ್ತ ಅಭ್ಯರ್ಥಿಯೆಂದು ಅನಿಸಿ, ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ಈ ಕ್ಷಣಕ್ಕೂ ನಾನು ಟಿಕೆಟ್ ಆಕಾಂಕ್ಷಿಯಲ್ಲ. ಅವಕಾಶ ಕೊಟ್ಟು, ಟಿಕೆಟ್ ನೀಡಿದರೆ ಬೇಡ ಎನ್ನುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜನರ ಪ್ರೀತಿ, ವಿಶ್ವಾಸ ಗಳಿಸಿದ ಅಹಿಂದ ವರ್ಗಕ್ಕೆ ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಯ. ಕುಟುಂಬ ರಾಜಕಾರಣ ಜಿಲ್ಲೆಯಲ್ಲಿ ಅಂತ್ಯವಾಗಬೇಕು. ಕಾಂಗ್ರೆಸ್ಸಿನಿಂದ ಮುಸ್ಲಿಮರಿಗೆ ಟಿಕೆಟ್ ಕೊಟ್ಟು, ಮತ್ತೊಂದು ಕಡೆ ತಮಗೆ ಬೇಕಾದವರಿಗೆ ಗೆಲ್ಲಿಸುವ ಕೆಲಸವೂ ಆಗಬಹುದು. ಒಂದು ವೇಳೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಸ್ವಾಭಿಮಾನಿ ಬಳಗವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಸ್ವಾಭಿಮಾನಿ ಬಳಗ ಅವಕಾಶ ನೀಡುವುದಿಲ್ಲ. ಅಹಿಂದ ವರ್ಗದ ಅಭ್ಯರ್ಥಿಯನ್ನೇ ದಕ್ಷಿಣಕ್ಕೆ ಕಣಕ್ಕಿಳಿಸುತ್ತೇವೆ. ನಾನು ಯಾರ ವಿರೋಧಿಯೂ ಅಲ್ಲ. ಕುಟುಂಬ ರಾಜಕಾರಣದ ವಿರೋಧಿಯಷ್ಟೇ ಎಂದು ಹೇಳಿದರು.

ಸ್ಪರ್ಧೆ ಇದ್ದಾಗ ಕೆಲಸ, ಕಾರ್ಯ ಸಾಧ್ಯ

ಬೆಂಗಳೂರಿನ ತಮ್ಮ ಇನ್‌ಸೈಟ್ಸ್ ಐಎಎಸ್ ತರಬೇತಿ ಕೇಂದ್ರವನ್ನು ದಾವಣಗೆರೆಯಲ್ಲೂ ಸ್ಥಾಪಿಸಿದೆ. ನನ್ನ ನಂತರ ದಾವಣಗೆರೆಯಲ್ಲೂ ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸ್ಥಾಪಿಸಿದ್ದಕ್ಕೆ ಸ್ವಾಗತಿಸುತ್ತೇನೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಇದ್ದಾಗ ಕೆಲಸ, ಕಾರ್ಯಗಳಾಗುತ್ತವೆ. ಉಚಿತ ತರಬೇತಿ ಕೇಂದ್ರ ಹೇಗೆ ನಡೆಯುತ್ತಿದೆಯೋ ಗೊತ್ತಿಲ್ಲ. ಆದರೆ, ಸಂಸ್ಥೆಯಿಂದ ಎಲ್ಲಾ ವರ್ಗದ ವಿದ್ಯಾರ್ಥಿ, ಯುವ ಜನರಿಗೆ ಒಳ್ಳೆಯದಾಗಲಿ ಅಂತಾ ಹಾರೈಸುತ್ತೇನೆ ಎಂದು ಜಿ.ಬಿ.ವಿನಯಕುಮಾರ ಹೇಳಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ 2028ರ ಚುನಾವಣೆಗೆ ನಾನೇ ಸ್ಪರ್ಧಿಸುತ್ತೇನೆ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮ ನನ್ನ ಊರು. 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನನಗೆ ಉತ್ತರ-ದಕ್ಷಿಣಕ್ಕೆ ಪಕ್ಷದ ಟಿಕೆಟ್ ಸಿಗದಿದ್ದರೆ ಸ್ವಾಭಿಮಾನಿ ಬಳಗದಿಂದ ಸ್ವತಂತ್ರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುತ್ತೇನೆ.

ಜಿ.ಬಿ.ವಿನಯಕುಮಾರ, ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ