ಬಳ್ಳಾರಿ: 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಪ್ರತಿ 6 ತಿಂಗಳಿಗೊಮ್ಮೆ ತಪ್ಪದೇ ಜಂತುಹುಳು ನಿವಾರಕ ಮಾತ್ರೆಗಳನ್ನು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಹೇಳಿದರು.

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಕೇಂದ್ರ ಬಂಡಿಹಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಂಡಿಹಟ್ಟಿ ವ್ಯಾಪ್ತಿಯ ಪಿ.ಎಂ.ಶ್ರೀ ಕೇಂದ್ರಿಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಜಂತುಹುಳು ನಿವಾರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರಂಭದಲ್ಲಿಯೇ ರಕ್ತಹೀನತೆ ಗುರುತಿಸುವುದರಿಂದ ಮಕ್ಕಳಲ್ಲಿ ಕಂಡುಬರಬಹುದಾದ ದೇಹದ ಬೆಳವಣಿಗೆಯ ಕುಂಠಿತ ತೊಂದರೆಗಳು ಹಾಗೂ ರಕ್ತಹೀನತೆಯಿಂದ ಉಂಟಾಗಬಹುದಾದ ಇತರೆ ಸಾಮಾನ್ಯ ತೊಂದರೆಗಳನ್ನು ಸಹಿತ ಆರಂಭದಲ್ಲಿಯೇ ಗುರ್ತಿಸಿ ಮಗುವಿನ ಬಾಲ್ಯವನ್ನು ಸದೃಢಗೊಳಿಸಲು ಜಂತುಹುಳು ನಿವಾರಣಾ ಮಾತ್ರೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ದಿಶೆಯಲ್ಲಿ 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ 200 ಮಿಲಿಗ್ರಾಮ್ ಮಾತ್ರೆಗಳನ್ನು ಹಾಗೂ 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 400 ಮಿಲಿಗ್ರಾಮ್ ಮಾತ್ರೆಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಣಾ ಮಾತ್ರೆಯನ್ನು ಶಾಲಾ ಶಿಕ್ಷಕರು, ಆರೋಗ್ಯ ಸಿಬ್ಬಂದಿ ಸಮ್ಮುಖದಲ್ಲಿಯೇ ಮಗುವಿಗೆ ಚೀಪಲು ಕೊಡಲಾಗುತ್ತಿದೆ. ಎಲ್ಲ ಪಾಲಕರು ಇದರ ಸದುಪಯೋಗ ಪಡೆದುಕೊಂಡು ಮಗುವಿನ ಆರೋಗ್ಯಕ್ಕೆ ಕೈಜೋಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲೆಯಲ್ಲಿ ಈಗಾಗಲೇ ಎಲ್ಲ ಗ್ರಾಮಗಳಲ್ಲಿ ಮತ್ತು ನಗರ, ಪಟ್ಟಣಗಳಲ್ಲಿ ಮಾತ್ರೆಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ. ಫೆ.10ರಂದು ಮಾತ್ರೆಗಳನ್ನು ಪಡೆಯದೇ ಉಳಿದಿರುವ ಮಕ್ಕಳು ಮಾಪ್ ಅಪ್ ದಿನ ಫೆ.16 ರಂದು ಪಡೆಯಲು ವಿನಂತಿಸಿದರು.


ಕಾರ್ಯಕ್ರದಲ್ಲಿ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ.ಯಾಸ್ಮಿನ್, ಪಿ.ಎಂ.ಶ್ರೀ ಕೇಂದ್ರೀಯ ವಿದ್ಯಾಲಯ ಪ್ರಾಂಶುಪಾಲ ಪ್ರತಾಪ್ ಸಿಂಗ್, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಡಿಎನ್‌ಒ ಗಿರೀಶ್, ಆರ್.ಕೆ.ಎಸ್.ಕೆ ಸಲಹೆಗಾರ ಮನೋಹರ್, ತಾಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಹಿರಿಯ ಆರೋಗ್ಯ ಪ್ರಾಥಮಿಕ ಸುರಂಕ್ಷಣಾಧಿಕಾರಿ ಗಂಗಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಮಹಾಲಿಂಗ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೊಗ್ಯ ಇಲಾಖೆ ಸಿಬ್ಬಂದಿ, ಶಾಲಾ ಬೋಧಕ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಇದ್ದರು.