ಸಾರಾಂಶ
ಕನ್ನಡಪ್ರಭ ವಾರ್ತೆ ಖಾನಾಪುರ
ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ಎಂಬ ನಾಣ್ಣುಡಿಯಂತೆ ಮಕ್ಕಳಿಗೆ ಜಗತ್ತಿನ ಪರಿಚಯ ಮಾಡಿಕೊಡುವ ತಾಯಂದಿರು ತಮ್ಮ ಮಕ್ಕಳಿಗೆ ವಿದ್ಯೆಯ ಜೊತೆಗೆ ವಿನಯತೆ, ವಿಧೇಯತೆ, ಸಂಸ್ಕಾರ ಮತ್ತಿತರ ಸದ್ಗುಣಗಳನ್ನು ನೀಡಬೇಕು ಎಂದು ಬೆಳಗಾವಿಯ ಮಹಾಂತೇಶನಗರ ರಹವಾಸಿಗಳ ಸಂಘದ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲೆ ನಿರ್ಮಲಾ ಬಟ್ಟಲ ಹೇಳಿದರು.ಪಟ್ಟಣದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಘಟಕ ಆಯೋಜಿಸಿದ್ದ ಮಹಿಳಾ ಸಮಾವೇಶ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದ ಅಂಗವಾಗಿ ಮಕ್ಕಳ ನೈತಿಕ ಶಿಕ್ಷಣದಲ್ಲಿ ಹೆತ್ತವರ ಪಾತ್ರದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಅಜ್ಜ-ಅಜ್ಜಿಯರು ಹೇಳುತ್ತಿದ್ದ ನೀತಿ ಕಥೆಗಳು, ಇಂತಹದ್ದು ಮಾಡಬೇಕು ಅಥವಾ ಇಂತಹದ್ದನ್ನು ಮಾಡಬಾರದು ಎನ್ನುವ ಸೂಚನೆಗಳು ಇಂದಿನ ಮಕ್ಕಳಿಗೆ ಸಿಗುತ್ತಿಲ್ಲ. ಟೆಕ್ನಾಲಾಜಿಯಲ್ಲಿ ಹಿಡಿದ ಸಾಧಿಸಿದ ಇಂದಿನ ಹೈಟೆಕ್ ಯುಗದಲ್ಲಿ ಹಿಂದಿನ ಕಾಲದಲ್ಲಿದ್ದ ಕೂಡು ಕುಟುಂಬಗಳು ವಿಭಜನೆಗೊಳ್ಳುತ್ತಿವೆ. ಪಾಲಕರು ತಮ್ಮ ಹೆತ್ತವರ ಜೊತೆ ವಾಸಿಸದೇ ಪ್ರತ್ಯೇಕವಾಗಿ ವಾಸಿಸುವ ಮತ್ತು ತಮಗೆ ಒಂದೇ ಮಗು ಸಾಕು ಎಂಬ ಮನೋಭಾವ ತಳೆಯುತ್ತಿದ್ದಾರೆ. ಈ ಕಾರಣದಿಂದ ಒಂಟಿಯಾಗಿ ಬೆಳೆಯುತ್ತಿರುವ ಮಕ್ಕಳು ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳು ಮತ್ತು ಸಂಬಂಧಗಳ ಮಹತ್ವ ಅರಿಯುವುದರಿಂದ ವಂಚಿತರಾಗುತ್ತಿದ್ದಾರೆ. ಹೆತ್ತವರು ಮಕ್ಕಳನ್ನು ಅತೀಯಾಗಿ ಪ್ರೀತಿಸುವ ಮತ್ತು ಅವರಿಗೆ ಹೆಚ್ಚಿನ ಸಲುಗೆ ನೀಡುತ್ತಿದ್ದು, ಈ ಕಾರಣದಿಂದ ಮಕ್ಕಳು ಮೊಬೈಲ್‌ಗಳ ದಾಸರಾಗಿ ದುಶ್ಚಟ, ದುರ್ನಡತೆಗಳನ್ನು ಕಲಿಯುತ್ತಿದ್ದಾರೆ. ತಂದೆ-ತಾಯಿ ತಮ್ಮ ಮಕ್ಕಳ ಚಲನವಲನದ ಕಡೆಗೆ ಲಕ್ಷ್ಯ ವಹಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಶಾಸಕ ವಿಠ್ಠಲ ಹಲಗೇಕರ ಉದ್ಘಾಟಿಸಿ ಮಾತನಾಡಿ, ಡಾ.ವೀರೇಂದ್ರ ಹೆಗಡೆಯವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಧರ್ಮಸ್ಥಳ ಯೋಜನೆ ಅಸಂಖ್ಯಾತ ಕುಟುಂಬಗಳಿಗೆ ಆಸರೆಯಾಗಿದೆ. ಗಡಿಭಾಗದ ಖಾನಾಪುರ ತಾಲೂಕಿನ ನೂರಾರು ಮಹಿಳೆಯರು ಈ ಯೋಜನೆಯಡಿ ಆರ್ಥಿಕ ಸವಲತ್ತು ಪಡೆದು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಬಿಇಒ ರಾಜೇಶ್ವರಿ ಕುಡಚಿ ಮಾತನಾಡಿ ಮಕ್ಕಳನ್ನು ಹೆಣ್ಣು ಮತ್ತು ಗಂಡು ಎಂಬ ಬೇಧ-ಭಾವದಿಂದ ಕಾಣದೇ ಸಮಾನವಾಗಿ ಕಾಣಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ನಿಯತಿ ಫೌಂಡೇಶನ್ ನಿರ್ದೇಶಕಿ ವರದಾ ಹಪ್ಪಳಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ಜ್ಞಾನ ವಿಕಾಸ ಯೋಜನೆಯ ಫಲಾನುಭವಿಗಳನ್ನು ಸತ್ಕರಿಸಲಾಯಿತು. ಯೋಜನೆಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ದೀಪಾ ಘಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಸ್ಥಳೀಯರಾದ ಶಂಕರ ಕಮ್ಮಾರ, ಬಸವರಾಜ ಹಪ್ಪಳಿ, ನಿರ್ಮಲಾ, ಅಣ್ಣಯ್ಯ ಸೇರಿದಂತೆ ತಾಲೂಕಿನ 25 ಜ್ಞಾನವಿಕಾಸ ಗುಂಪುಗಳ 135 ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು, ಯೋಜನೆಯ ಸಿಬ್ಬಂದಿ, ಸೇವಾ ಪ್ರತಿನಿಧಿಗಳು ಮತ್ತು ಆಹ್ವಾನಿತರು ಭಾಗವಹಿಸಿದ್ದರು.ಯೋಜನಾಧಿಕಾರಿ ಗಣಪತಿ ನಾಯ್ಕ ಸ್ವಾಗತಿಸಿದರು. ಅರುಣಕುಮಾರ ಕಾರ್ಯಕ್ರಮ ನಿರ್ವಹಿಸಿದರು. ಸುರೇಖಾ ಕೋಳಿ ವಂದಿಸಿದರು.