ಸಾರಾಂಶ
ಕನ್ನಡ ಕಡ್ಡಾಯ ಎಂಬ ಕನ್ನಡಪರ ಹೋರಾಟಗಾರರ ವಿಷಯಕ್ಕೆ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಎಲ್ಲರೂ ಮೊದಲ ಆದ್ಯತೆ ನೀಡಬೇಕು. ಸರ್ಕಾರವು ಈ ವಿಷಯಕ್ಕೆ ಬದ್ಧವಿದೆ ಎಂದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ನಾಮಫಲಕ ಇರಲಿ, ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಿ, ಆಮೇಲೆ ಉಳಿದ ಭಾಷೆ ಹಾಕಬಹುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಕಡ್ಡಾಯ ಎಂಬ ಕನ್ನಡಪರ ಹೋರಾಟಗಾರರ ವಿಷಯಕ್ಕೆ ಪ್ರತಿಕ್ರಿಯೆ ನೀಡಿ, ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಎಲ್ಲರೂ ಮೊದಲ ಆದ್ಯತೆ ನೀಡಬೇಕು. ಸರ್ಕಾರವು ಈ ವಿಷಯಕ್ಕೆ ಬದ್ಧವಿದೆ. ಖಾಸಗಿಯರು ಸ್ವಪೇರಿತವಾಗಿ ಕನ್ನಡ ಭಾಷೆಯ ನಾಮಫಲಕ ಹಾಕಬೇಕೆಂದು ತಿಳಿಸಿದರು.
ಸುಳಗಾ ಗ್ರಾಮದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಯಾವುದೇ ಭಾಷೆ, ಧರ್ಮ ಇರಲಿ, ಯಾರ ಭಾವನೆಗಳಿಗೂ ಧಕ್ಕೆ ಬಾರದಂತೆ ಎಲ್ಲರೂ ನಡೆದುಕೊಳ್ಳಬೇಕು. ಕಾನೂನು ಕೈಗೆತ್ತಿಕೊಂಡರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಬೆಳಗಾವಿ ನಗರದಲ್ಲಿ ಯುಜಿಡಿ ವ್ಯವಸ್ಥೆ, ಬೋರ್‌ವೆಲ್‌ಗೆ ಕೊಳಚೆ ನೀರು ಸೇರ್ಪಡೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾಳೆ ಸಂಬಂಧಿಸಿದ ಸಚಿವರು ಬೆಳಗಾವಿಗೆ ಆಗಮಿಸುತ್ತಿದ್ದು, ಸಮಸ್ಯೆಗಳ ಪಟ್ಟಿಯನ್ನು ಸಿದ್ದಪಡಿಸುತ್ತಿದ್ದು, ಬೋರ್‌ವೆಲ್‌ಗೆ ಕೊಳಚೆ ನೀರು ಸೇರ್ಪಡೆಯಾಗದಂತೆ ಶೀಘ್ರವೇ ಕ್ರಮಕೈಗೊಳ್ಳಲು ತಿಳಿಸುತ್ತೇನೆ. ಬೆಳಗಾವಿ ಜಿಲ್ಲೆಯ 350 ಪೌರ ಕಾರ್ಮಿಕರಿಗೆ ನಾಳೆ ನೇಮಕಾತಿ ಆದೇಶ ನೀಡುತ್ತಿದ್ದೇವೆ ಎಂದು ತಿಳಿಸಿದರು.