ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ಪಟ್ಟಣದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ, ನೂತನ ಆಡಳಿತ ಮಂಡಳಿ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಶಾಸಕ ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಪ.ಪಂ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಾಲತವಾಡ ಪಟ್ಟಣದ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಿ, ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ಹಾಗೂ ರಸ್ತೆ ಅತಿಕ್ರಮಣದಂತಹ ಸಮಸ್ಯಗಳನ್ನು ಶೀಘ್ರದಲ್ಲೆ ಪರಿಹರಿಸಿ ಆಡಳಿತಕ್ಕೆ ಚುರುಕು ನೀಡಬೇಕು. ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಸದಸ್ಯರು ಅಧಿಕಾರಿಗಳೊಂದಿಗೆ ಪ್ರತಿ ವಾರ್ಡ್‌ಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಪ್ರಾರಂಭಿಸಿ. ಯುಜಿಡಿ ಯೋಜನೆಯ ಬಗ್ಗೆ ಕ್ರಿಯಾಯೋಜನೆ ಮಾಡಿ ಕಳಿಸಿದ್ದು, ಶೀಘ್ರದಲ್ಲೆ ಮಂಜೂರಾಗುತ್ತದೆ.ಪ.ಪಂ ಮಳಿಗೆಗಳನ್ನು ದುರಸ್ತಿಗೊಳಿಸಿ ಹರಾಜು ಪ್ರಕ್ರಿಯೆ ನಡೆಯಲಿ ಎಂದು ಸಲಹೆ ನೀಡಿದರು.ನಂತರ ಪ.ಪಂ ಆವರಣದಲ್ಲಿಯೇ ಶಾಸಕರು ಜನ ಸಂಪರ್ಕ ಸಭೆ ನಡೆಸಿದರು. ಈ ವೇಳೆ ಪ್ರಮುಖವಾಗಿ ಗೂಡಂಗಡಿಗಳು ರಸ್ತೆಯ ಮೇಲೆ ಅತಿಕ್ರಮಣ ಮಾಡಿದ್ದಾರೆ. ಅಂಗಡಿಗಳಿಂದ ಸಾವಿರಾರು ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ. ಅವರು ಪ.ಪಂ 10 ಮಾತ್ರ ಕರ ಕಟ್ಟುತ್ತಿದ್ದಾರೆ. ಪ್ರಮುಖ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿಯ ಅಂಗಡಿಗಳನ್ನು ಬಾಡಿಗೆ ಪಡೆದಿದ್ದೇವೆ. ನಮ್ಮ ಅಂಗಡಿಯ ಮುಂದೆ ಗೂಡಂಗಡಿಗಳನ್ನು ಇಟ್ಟಿದ್ದಾರೆ. ಅವುಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಮುದ್ದೇಬಿಹಾಳದಲ್ಲಿ ಕೂಡ ಅತಿಕ್ರಮಣ ಮಾಡಿದ್ದಾರೆ. ಅಲ್ಲಿಯೂ ತೆರವು ಆರಂಭವಾಗಿದೆ. ಇಲ್ಲಿವೂ ತೆರವಿಗೆ ಪ.ಪಂ ಮುಂದಾಗಬೇಕು ಎಂದು ಸೂಚಿಸಿದರು.ಈ ವೇಳೆ ಶಾಸಕರಾದ ಸಿ.ಎಸ್.ನಾಡಗೌಡ, ತಹಸೀಲ್ದಾರ್, ನೂತನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಪ.ಪಂ ಕಾರ್ಯಾಲಯದಿಂದ ಸನ್ಮಾನಿಸಲಾಯಿತು.
ಈ ವೇಳೆ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಪ.ಪಂ ಸಿಒ ಈರಣ್ಣ ಕೊಣ್ಣೂರ, ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್, ಉಪಾಧ್ಯಕ್ಷ ಬಸವರಾಜ ಗಡ್ಡಿ, ಸದಸ್ಯರಾದ ಪೃಥ್ವಿರಾಜ ನಾಡಗೌಡ ಸೇರಿದಂತೆ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.