ಸಾರಾಂಶ
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸರ್ಕಾರ ಇತ್ತೀಚೆಗೆ ರಚಿಸಿದ ಆರೋಗ್ಯ ರಕ್ಷಾ ಸಮಿತಿ ಸಭೆ ಶಾಸಕ ಟಿ. ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ಆಸ್ಪತ್ರೆ ಹಲವಾರು ಸಮಸ್ಯೆಗಳ ಬಗ್ಗೆ ವೈದ್ಯರು ಹಾಗೂ ರಕ್ಷಾ ಸಮಿತಿ ಸದಸ್ಯರೊಂದಿಗೆ ಶಾಸಕರು ಚರ್ಚಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸರ್ಕಾರ ಇತ್ತೀಚೆಗೆ ರಚಿಸಿದ ಆರೋಗ್ಯ ರಕ್ಷಾ ಸಮಿತಿ ಸಭೆ ಶಾಸಕ ಟಿ. ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ಆಸ್ಪತ್ರೆ ಹಲವಾರು ಸಮಸ್ಯೆಗಳ ಬಗ್ಗೆ ವೈದ್ಯರು ಹಾಗೂ ರಕ್ಷಾ ಸಮಿತಿ ಸದಸ್ಯರೊಂದಿಗೆ ಶಾಸಕರು ಚರ್ಚಿಸಿದರು.ಆಡಳಿತಾಧಿಕಾರಿ ಡಾ.ಜೆ.ಡಿ. ವೆಂಕಟೇಶ್ ಮಾತನಾಡಿ, ಇಲ್ಲಿನ ಆಸ್ಪತ್ರೆಯಲ್ಲಿ ಹೆರಿಗೆಯೂ ಸೇರಿದಂತೆ ಎಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ವಿಭಾಗದ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಗೆ ಬರುವ ರೋಗಿಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನಿಗಾ ವಹಿಸಲಾಗಿದೆ. ಕಳೆದ ತಿಂಗಳು ಇಲ್ಲಿಗೆ ಭೇಟಿ ನೀಡಿದ್ದ ಆಸ್ಪತ್ರೆ ಅಧಿಕಾರಿಗಳು ತಪಾಸಣೆ ನಡೆಸಿ ಮೆಚ್ಚುಗೆ ಸೂಚಿಸಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಆಸ್ಪತ್ರೆ ಸುವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ, ಈಗ ಇರುವ ಎಲ್ಲಾ ಸೌಲಭ್ಯಗಳನ್ನು ಸಮಯೋಚಿತವಾಗಿ ಉಪಯೋಗಿಸಿಕೊಳ್ಳಬೇಕು. ಯಾವುದೇ ಶುಲ್ಕ ಹೆಚ್ಚಿಸದೇ ಕಣ್ಣಿನ ವೈದ್ಯರು ಹೊರತು ಪಡಿಸಿ ಎಲ್ಲಾ ವಿಭಾಗಗಳಲ್ಲೂ ವೈದ್ಯರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗೆ ಯಾವುದೇ ಸಮಯದಲ್ಲಾದರೂ ಉತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕು. ಸಾರ್ವಜನಿಕರಿಂದ ದೂರುಗಳು ಬಂದರೂ ಆಡಳಿತಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮಾಹಿತಿ ನೀಡಬೇಕು ಎಂದರು.ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಿವೃತ್ತ ಪ್ರಾಂಶುಪಾಲ ಎಂ. ಕರಿಯಪ್ಪ, ನಿವೃತ್ತ ಕಂದಾಯಾಧಿಕಾರಿ ಮೂಡಲಗಿರಿಯಪ್ಪ, ನಿವೃತ್ತ ಹಿರಿಯ ಫಾರ್ಮಸ್ಟೀಸ್ ಎನ್. ಪ್ರೇಮಕುಮಾರ್, ಶಿವಸ್ವಾಮಿ, ಉಷಾ, ವಿಶ್ವನಾಥ, ಆದಿಶೇಷ, ವೈದ್ಯರಾದ ಮಂಜಪ್ಪ, ಆದಿಮನಿ, ಪ್ರಜ್ವಲ್ ಧನ್ಯ, ಅಮೀತ್ ಗುಪ್ತ, ಆರ್. ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.