ಸಾರಾಂಶ
ರಾಜ್ಯ ಸರ್ಕಾರ ಈಗಾಗಲೇ ನೂತನ ಪಿಂಜಾರ ಹಾಗೂ ಇತರ ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದು, ಈ ನಿಗಮಕ್ಕೆ ಹೆಚ್ಚು ಅನುದಾನ ನೀಡುವಂತೆ ಆಗ್ರಹಿಸಿ ಸೋಮವಾರ ನದಾಫ್/ಪಿಂಜಾರ ಸಂಘ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪಿಂಜಾರ ಸಂಘ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
ಕನ್ನಡಪ್ರಭ ವಾರ್ತೆ ಯಲಬುರ್ಗಾರಾಜ್ಯ ಸರ್ಕಾರ ಈಗಾಗಲೇ ನೂತನ ಪಿಂಜಾರ ಹಾಗೂ ಇತರ ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದು, ಈ ನಿಗಮಕ್ಕೆ ಹೆಚ್ಚು ಅನುದಾನ ನೀಡುವಂತೆ ಆಗ್ರಹಿಸಿ ಸೋಮವಾರ ನದಾಫ್/ಪಿಂಜಾರ ಸಂಘ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪಿಂಜಾರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಎಫ್. ನದಾಫ್ ಹಾಗೂ ಯಲಬುರ್ಗಾ ತಾಲೂಕು ಪಿಂಜಾರ ಸಂಘದ ಅಧ್ಯಕ್ಷ ಖಾದರಿಸಾಬ ತೋಳಗಲ್ ಮಾತನಾಡಿ, ಸರ್ಕಾರದ ವೃತ್ತಿಪರ ಜಾತಿಗಳ ವಿಂಗಡಣೆಯಲ್ಲಿ ನದಾಫ್, ಪಿಂಜಾರ ಸಂಘ ಉಪಪಂಗಡಕ್ಕೆ ಸೇರಿದ್ದು ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದಂತೆ ಪ್ರವರ್ಗ-೧ ಮೀಸಲಾತಿ ಹೊಂದಿದೆ ಸರ್ಕಾರದ ನಿರ್ದೇಶನದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರ ಯೋಜನೆಗಳು ಸಮರ್ಪಕ ದೊರೆಯದೆ ತೊಂದರೆ ಅನುಭವಿಸುತ್ತಿದ್ದು, ಪಿಂಜಾರ ಸಮಾಜ ತನ್ನ ಮೀಸಲಾತಿ ಜೊತೆಗೆ ಇತರ ಯೋಜನೆಗಳ ಪಡೆದುಕೊಳ್ಳುವಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ. ನದಾಫ್, ಪಿಂಜಾರ ಸಮಾಜದವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದು ಈ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಗಮನಹರಿಸುವ ಮೂಲಕ ಸ್ಥಾಪನೆಗೊಂಡ ನದಾಫ್, ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಹೆಚ್ಚು ಅನುದಾನ ನೀಡಬೇಕು ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಖಾಜಾವಲಿ ಜರಕುಂಟಿ ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ನದಾಫ್, ಪಿಂಜಾರ ಹಾಗೂ ಇತರ ೧೩ಜಾತಿಗಳ ಅಭಿವೃದ್ಧಿ ನಿಗಮಗಳ ಆದೇಶ ನೀಡಿದ್ದು, ಈ ಅಭಿವೃದ್ಧಿ ನಿಗಮಗಳಿಗೆ ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳ ರೂಪಿಸುವಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಮೂಲಕ ಅನುದಾನ ನೀಡುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನದಾಫ್, ಪಿಂಜಾರ ಸಂಘದ ಸರ್ವ ಸದಸ್ಯರು ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.