ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆಗೆ ಕುಡಿವ ನೀರಿಗೆ ಅನುದಾನ ಒದಗಿಸುವಂತೆ ಸುರಪುರ ಕಾಂಗ್ರೆಸ್ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲದಿಂದಾಗಿ ಹಳ್ಳ-ಕೊಳ್ಳಗಳು ಬತ್ತಿ ಹೋಗಿದ್ದು, ಕುಡಿವ ನೀರಿನ ಸಮಸ್ಯೆ ತಲೆದೋರಿದ್ದು, ಕೊಳವೆ ಬಾಯಿ ಮೂಲಕ ನೀರು ಪೂರೈಸಲು ಅನುದಾನ ಒದಗಿಸಬೇಕು ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆಗೆ ಕಾಂಗ್ರೆಸ್ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಮನವಿ ಸಲ್ಲಿಸಿದರು.

ಪ್ರಸ್ತುತ ಕ್ಷೇತ್ರದಲ್ಲಿ ನೀರಿನ ತೊಂದರೆಯಿದ್ದು, ಬೇಸಿಗೆ ಆರಂಭದಲ್ಲಿ ಸ್ವಲ್ಪಮಟ್ಟದ ಸಮಸ್ಯೆ ಎದುರಾಗಿದೆ. ಇದನ್ನು ನಿವಾರಿಸಲು ಸುರಪುರ ಮತ್ತು ಹುಣಸಗಿ ತಾಲೂಕುಗಳಿಗೆ ₹1 ಕೋಟಿ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಲು ಮತ್ತು ಪೈಪ್‌ಲೈನ್ ಮುಖಾಂತರ ನೀರು ಸರಬರಾಜು ಮಾಡಲು ಅನುದಾನ ಒದಗಿಸಬೇಕು ಎಂದಾಗ ಸಚಿವರು ಹಸಿರು ನಿಶಾನೆ ತೋರಿದ್ದು, ಸಮಸ್ಯೆ ಪರಿಶೀಲಿಸಿ ಅನುದಾನ ಒದಗಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ ಎಂದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ವೆಂಕೋಬ ಯಾದವ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಭೀಮರಾಯ ಮೂಲಿಮನಿ ಇದ್ದರು.