ಸಾರಾಂಶ
ಧಾರವಾಡ: ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಹಣ ನೀಡಿ ಪುರುಷರಿಂದ ವಸೂಲಿ ಮಾಡುತ್ತಿದೆ. ಗ್ಯಾರಂಟಿ ನಮಗೆ ಹೊರೆಯಾಗುತ್ತಿದೆ ಎಂದು ಸ್ವತಃ ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ಹೊಸ ಹೊಸ ಆದಾಯ ಹುಡುಕುವ ಬದಲು ರಾಜ್ಯ ಸರ್ಕಾರ ಬರೀ ಕೈ ಚೆಲ್ಲುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನುದಾನದ ಕೊರತೆಯಿಂದ ಎಸ್‌ಸಿಪಿ, ಎಸ್‌ಟಿಪಿ ಹಣವನ್ನು ಸಹ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ. ಯಾವ ಇಲಾಖೆಗಳಿಗೂ ಸರಿಯಾದ ಅನುದಾನ ಇಲ್ಲದ ಕಾರಣ ಅಧಿಕಾರಿಗಳು ಕೈ ಚೆಲ್ಲಿ ಕೂತಿದ್ದಾರೆ. ಭಾಗ್ಯಗಳನ್ನು ಈಡೇರಿಸುವಲ್ಲಿ ಸಂರ್ಪೂಣ ವಿಫಲವಾಗಿರುವ ಸರ್ಕಾರ, ಆದಾಯ ಹೆಚ್ಚಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಆದರೆ, ಯೋಜನೆಗಳಿಗೆ ಕಡಿವಾಣ ಹಾಕಲು ಚಿಂತಿಸುತ್ತಿದ್ದಾರೆ. ಇಂತಹ ದುರಾಳಿತ ನೀಡುವ ಸರ್ಕಾರವನ್ನು ನಾವು ಎಂದಿಗೂ ಕಂಡಿಲ್ಲ ಎಂದರು.ಸರ್ಕಾರದ ಭ್ರಷ್ಟಾಚಾರ ಹಾಗೂ ಹಗರಣಗಳ ಕುರಿತು ಸದನದಲ್ಲಿ ಧ್ವನಿ ಎತ್ತಲಿದ್ದು, ಈ ವಿಚಾರವಾಗಿ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್. ಅಶೋಕ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಮೈಕ್ರೋ ಫೈನಾನ್ಸ್ ಮೂಲಕ ಸಾಲ ಪಡೆದು ಅನೇಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೀಗಾಗಿ, ಈ ವಿಚಾರವಾಗಿ ವಿಧಾನಸಭೆ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಲಾಗುವುದು ಎಂದರು.
ಜೆಡಿಎಸ್ ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ವೆಂಕಟರಾವ್ ನಾಡಗೌಡ ಮಾತನಾಡಿ, ಜಿಪಂ, ತಾಪಂ ಚುನಾವಣೆಗೆ ಪಕ್ಷ ತಯಾರಿ ನಡೆಸುತ್ತಿದೆ. ಈ ಚುನಾವಣೆಗಳನ್ನೂ ಬಿಜೆಪಿ ಮೈತ್ರಿಯೊಂದಿಗೆ ಎದುರಿಸಲಾಗುವುದು. ಚುನಾವಣೆ ದಿನಾಂಕ ಘೋಷಣೆ ಬಳಿಕವೇ ಸಿಟುಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತುಂಬುವ ಕೆಲಸ ನಡೆದಿದ್ದು, ಸ್ಥಳೀಯ ಚುನಾವಣೆಗಳಲ್ಲಿ ಅಧಿಕಾರಕ್ಕೇರುವುದೇ ನಮ್ಮ ಉದ್ದೇಶವಾಗಿದೆ ಎಂದರು.ಪಕ್ಷದ ಸದಸ್ಯತ್ವ ನೋಂದಣಿ ಈಗಾಗಲೇ ಆರಂಭಿಸಿದ್ದು, ತಾಲೂಕು, ಜಿಲ್ಲಾ ಮಟ್ಟದ ಅಧ್ಯಕ್ಷರ, ಪದಾಧಿಕಾರಿಗಳ ಸಭೆ ನಡೆಸಿ ನೋಂದಣಿ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಇದರ ಜತೆಗೆ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧ್ಯಕ್ಷರ ಚುನಾವಣೆಗೆ ಈಗಾಗಲೇ ತಯಾರಿ ಸಹ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಚಿಂತನೆ ನಡೆಸಲಾಗಿದೆ ಎಂದರು.
ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರಾಜ್ಯದ ಜನರಿಗೆ ನೀಡಿರುವ ಕೊಡುಗೆಗಳನ್ನು ಜನ ಇನ್ನೂ ಮರೆತಿಲ್ಲ. ಹೀಗಾಗಿ, ಪಕ್ಷಕ್ಕೆ ಹೆಚ್ಚಿನ ಜನರು ಸದಸ್ಯತ್ವ ಪಡೆಯಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೇತಗಾನಹಳ್ಳಿ ಜಮೀನು ವಿಷಯವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೇಲೆ ಭೂ ಒತ್ತುವರಿ ಆರೋಪ ಕುರಿತು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಈ ವಿಷಯವಾಗಿ ರಾಜ್ಯ ಸಚಿವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನ್ಯಾಯಾಲಯದ ಆದೇಶದದಂತೆ ಅಧಿಕಾರಿಗಳು ಸರ್ವೇ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಆದೇಶಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.
ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಗ್ರಾಮಾಂತರ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಂಜುನಾಥ ಹಗೇದಾರ, ಸಿದ್ದು ಒಡೆಯರ ಇದ್ದರು.ಪರಮೇಶ್ವರ ಹೇಳಿಕೆ ಸತ್ಯ
ರಾಜ್ಯ ಸರ್ಕಾರಕ್ಕೆ ಗ್ಯಾರಂಟಿಗಳು ಹೊರೆಯಾಗಿವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ನೀಡಿರುವ ಹೇಳಿಕೆ ಸತ್ಯ ಹಾಗೂ ವಾಸ್ತವದ ಸಂಗತಿ. ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್, ಈಗ ಅವುಗಳನ್ನು ಜನರಿಗೆ ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಕೆ ಮಾಡುವಲ್ಲಿ ಹೈರಾಣಾಗಿರುವ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತಾಗಿದೆ ಎಂದು ವೆಂಕಟರಾವ್ ನಾಡಗೌಡ ವ್ಯಂಗ್ಯವಾಡಿದರು.