ಕಿವಿಗಳ ಆರೈಕೆಗೆ ಆದ್ಯತೆ ಕೊಡಿ: ಡಿಎಚ್‌ಓ ಡಾ. ಶಂಕರ್ ನಾಯ್ಕ

| Published : Mar 28 2025, 12:37 AM IST

ಸಾರಾಂಶ

ಕರ್ಕಶ ಶಬ್ದಗಳ ಹಾವಳಿ, ಡಿಜೆ ಸೌಂಡ್, ಪಟಾಕಿ ಸದ್ದು, ಕಾರ್ಖಾನೆ ಶಬ್ದ, ಅತಿಯಾದ ಹೆಡ್‌ಫೋನ್‌ಗಳ ಬಳಕೆಯಿಂದಾಗಿ ಶ್ರವಣ ದೋಷ ಸಮಸ್ಯೆ ಹೆಚ್ಚಾಗಲಿವೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕರ್ಕಶ ಶಬ್ದಗಳ ಹಾವಳಿ, ಡಿಜೆ ಸೌಂಡ್, ಪಟಾಕಿ ಸದ್ದು, ಕಾರ್ಖಾನೆ ಶಬ್ದ, ಅತಿಯಾದ ಹೆಡ್‌ಫೋನ್‌ಗಳ ಬಳಕೆಯಿಂದಾಗಿ ಶ್ರವಣ ದೋಷ ಸಮಸ್ಯೆ ಹೆಚ್ಚಾಗಲಿವೆ. ಇದಕ್ಕೂ ಮುನ್ನ ಕಿವಿಗಳ ಆರೈಕೆಗೆ ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್‌.ಆರ್‌. ಶಂಕರ ನಾಯ್ಕ ಹೇಳಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಏರ್ಪಡಿಸಿದ್ದ ವಿಶ್ವ ಶ್ರವಣ ದಿನಾಚರಣೆ ನಿಮಿತ್ತ ರಾಷ್ಟ್ರೀಯ ಶ್ರವಣ ದೋಷ ನಿರ್ವಹಣಾ ಮತ್ತು ನಿಯಂತ್ರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರೀ ಶಬ್ದಗಳಿಂದ ಹಾಗೂ ಪಟಾಕಿ ಶಬ್ದ, ಧ್ವನಿವರ್ಧಕ, ಕಾರ್ಖಾನೆಯ ಶಬ್ದ, ಡಿಜೆ ಶಬ್ದ ಇತ್ಯಾದಿಗಳಿಂದ ಶ್ರವಣದೋಷ ಉಂಟಾಗುತ್ತಿದ್ದು. ಕಕರ್ಶ ಶಬ್ದಗಳಿಂದ ಸಾಧ್ಯವಾದಷ್ಟು ದೂರ ಇರಬೇಕಿದೆ. ಅತಿ ಜೋರಾದ ಶಬ್ದವಿರುವ ಕಡೆ ಕೆಲಸ ಮಾಡುವವರು ಕಿವಿ ರಕ್ಷಾ ಕವಚವನ್ನು ಧರಿಸುವುದು ಉತ್ತಮ. ಕಲುಷಿತ ನೀರಿನಲ್ಲಿ ಈಜಾಡುವುದು, ಎತ್ತರ ಪ್ರದೇಶದಿಂದ ನೀರಿನಲ್ಲಿ ಧುಮುಕಿದಾಗ ನೀರಿನ ರಭಸಕ್ಕೆ ಕಿವಿಯಲ್ಲಿ ಸೋರಿಕೆ ಸಮಸ್ಯೆಗಳು ಉಂಟಾಗಲಿವೆ. ಕಿವಿಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಲು ಹತ್ತಿ ಕಡ್ಡಿಯನ್ನು ಬಳಸಬೇಕು. ಕಿವಿ ಸಮಸ್ಯೆಗಳು ಕಂಡು ಬಂದಲ್ಲಿ ಇಎನ್‌ಟಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು ಎಂದರು.

ಸರ್ಕಾರ ಶ್ರವಣ ಸಮಸ್ಯೆಗೆ ಅನೇಕ ಯೋಜನೆಗಳನ್ನು ರೂಪಿಸಿದೆ. 14 ವರ್ಷದೊಳಗಿನ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಸಾಧನೆಗಳನ್ನು ವಿತರಿಸಲಾಗುತ್ತಿದೆ. 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಶ್ರವಣ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲಾಗುತ್ತಿದೆ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ ಮಾತನಾಡಿ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಶ್ರವಣ ಆರೈಕೆ ಸೇವೆಗಳು ಲಭ್ಯವಿದೆ. ಕಿವಿಗಳಿಗೆ ಹಾನಿಯಾಗದಂತೆ ಮುನ್ನಚರಿಕೆ ಕ್ರಮಗಳನ್ನು ಪಾಲಿಸಬೇಕು. ಶ್ರವಣ ಸಮಸ್ಯೆಗಳಿಗೆ ಸಾಮಾನ್ಯವಾಗಿ ₹6 ರಿಂದ 8 ಲಕ್ಷ ವರೆಗೆ ಚಿಕಿತ್ಸೆ ವೆಚ್ಚ ತಗುಲಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಗುಣಮಟ್ಟದ ಸೇವೆಗಳು ಸಿಗಲಿವೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಹರಿಪ್ರಸಾದ್, ನೇತ್ರ ತಜ್ಞ ಡಾ. ರಾಜಶೇಖರ್, ಹಿರಿಯ ತಜ್ಞ ಡಾ. ಭರತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಧರ್ಮನಗೌಡ, ಚಿತ್ರಾ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.