ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಹೊಂದಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಮಕ್ಕಳ ಸ್ನೇಹಿ ನ್ಯಾಯಾಲಯ ಮತ್ತು ಸತ್ರ ನ್ಯಾಯಾಧೀಶ ಎಚ್.ಜೆ.ಕೃಷ್ಣ ಅವರು ತಿಳಿಸಿದರು.ನಗರದ ಕರಿನಂಜನಪುರ ಸಮೀಪದ ಮಾದರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಮುಂಭಾಗ ರಸ್ತೆಗೆ ಈಶ್ವರಿ ಸೋಶಿಯಲ್ ಟ್ರಸ್ಟ್ ವತಿಯಿಂದ ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ತುಂಬಾ ಹೆಚ್ಚಾಗಿದ್ದು ಉಷ್ಣಾಂಶವನ್ನು ಕಡಿಮೆ ಮಾಡಬೇಕಾದರೆ ಹೆಚ್ಚು ಗಿಡ, ಮರಗಳನ್ನು ಸಂರಕ್ಷಣೆ ಮಾಡಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಮಾತನಾಡಿ, ಕೆರೆ, ಕಟ್ಟೆ, ಕಾಡು ಸಂರಕ್ಷಣೆ ಮಾಡಿದರೆ ಮಳೆಗಾಲದಲ್ಲಿ ನೀರು ಶೇಖರಣೆಯಾಗಿ ಪ್ರಾಣಿ, ಪಕ್ಷಿಗಳಿಗೆ, ಜಲಚರಗಳಿಗೆ ಹಾಗೂ ಮಾನವನಿಗೆ ಕುಡಿಯಲು ನೀರನ್ನು ಪಡೆಯಬಹುದು ಹಾಗೂ ಉತ್ತಮ ಪ್ರಕೃತಿ ಸೌಂದರ್ಯವನ್ನು ಕಾಣಬಹುದು. ಗಿಡ, ಮರಗಳನ್ನು ಬೆಳೆಸಿ ಅದರಿಂದ ನಾವುಗಳು ಶುದ್ಧ ಗಾಳಿಯನ್ನು ಪಡೆಯಬಹುದಾಗಿದೆ ಎಂದರು.
ಈಶ್ವರಿ ಸೋಶಿಯಲ್ ಟ್ರಸ್ಟ್ ಸಂಸ್ಥಾಪಕ ಹಾಗೂ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಮಾತನಾಡಿ, ಚಾ.ನಗರ ಜಿಲ್ಲೆಯ ಸುತ್ತಮುತ್ತ ೧೨,೦೦೦ ಕ್ಕೂ ಹೆಚ್ಚು ಗಿಡಗಳನ್ನು ನಮ್ಮ ಟ್ರಸ್ಟ್ ವತಿಯಿಂದ ನೆಟ್ಟು ಪೋಷಣೆ ಮಾಡಲಾಗುತ್ತಿದೆ, ಪರಸರ ಸಂರಕ್ಷಣೆ ಕಾರ್ಯವು ನಿತ್ಯ ನಿರಂತರವಾಗಿ ಕಳೆದ ೮ ವರ್ಷಗಳಿಂದ ಸಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚಾಮರಾಜನಗರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ವಿಸ್ತಾಣಾಧಿಕಾರಿ ಲಿಂಗರಾಜು, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಶಿಲ್ಪ ಹಾಗೂ ಶಾಲಿನಿ ಸೇರಿದಂತೆ ವಿದ್ಯಾರ್ಥಿನಿಯರು ಹಾಜರಿದ್ದರು.ಪರಿಸರ ಕಾಪಾಡಿ ಉತ್ತಮ ವಿದ್ಯಾರ್ಥಿ ಎನಿಸಿಕೊಳ್ಳಿಚಾಮರಾಜನಗರ: ಪರಿಸರವನ್ನು ಕಾಪಾಡಿ ಉತ್ತಮ ವಿದ್ಯಾರ್ಥಿಯಾಗಿ ಸಾರ್ವಜನಿಕರಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಗೆ ಕೀರ್ತಿ ತರಬೇಕು. ಪರಿಸರದ ರಕ್ಷಣೆಯಿಂದ ಸುತ್ತಮುತ್ತಲಿನ ವಾತಾವರಣ ಶುದ್ಧವಾಗುತ್ತದೆ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ತಿಳಿಸಿದರು.ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಚಾ.ನಗರ ಜಿಲ್ಲೆಯು ಹಸಿರಿನಿಂದ ಕೂಡಿದೆ. ಹಸಿರು ಆರೋಗ್ಯದ ಸಂಕೇತ ಹಸಿರನ್ನು ಉಳಿಸಿಕೊಳ್ಳುವ ಹೊಣೆ ಪ್ರತಿಯೊಬ್ಬರದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ರುದ್ರಮೂರ್ತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಚಿತವಾಗಿ ನೀಡಿರುವ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಶಾಲೆಯ ಪರಿಸರವನ್ನು ಸ್ವಚ್ಚವಾಗಿ ಇಟ್ಟಿಕೊಳ್ಳಬೇಕು. ಒಂದು ಗಿಡವನ್ನು ದತ್ತು ತೆಗೆದು ಅದನ್ನು ಪೋಷಣೆ ಮಾಡಬೇಕು ಮುಂದಿನ ದಿನಗಳಲ್ಲಿ ನೀವು ಬೆಳೆಸಿದ ಗಿಡ ಹೆಮ್ಮರವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರತ್ನಮ್ಮ, ಕುಮಾರ್, ದೈಹಿಕ ಶಿಕ್ಷಕ ರಂಗಸ್ವಾಮಿ, ಮಹೇಶ್, ನಾಗರಾಜು, ಯಶಪಾಲ್. ಡಿ.ಎಸ್. ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.