ಸಾರಾಂಶ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡಾಶಕ್ತಿ ಮಹತ್ವದ ಸ್ಥಾನ ಪಡೆದಿದೆ.
ಯಲ್ಲಾಪುರ: ವಿದ್ಯಾಭ್ಯಾಸಕ್ಕೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಆಟೋಟಗಳಿಗೆ ನೀಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಇತ್ತೀಚೆಗೆ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪದವಿ ಪೂರ್ವ ಕಾಲೇಜುಗಳ ಇಲಾಖಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಕ್ರೀಡಾಕೂಟ ಆಯೋಜಿಸುವ ಸಂಕಷ್ಟವನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂಬ ಭರವಸೆ ನೀಡಿದರು.ಕ್ರೀಡಾ ಪ್ರೇಮಿ ಪದ್ಮನಾಭ ಶಾನಭಾಗ್ ಮಾತನಾಡಿ, ತಾಲೂಕುಮಟ್ಟ ತಲುಪಿರುವ ವಿದ್ಯಾರ್ಥಿಗಳು ಮುಂದೊಂದು ದಿನ ಒಲಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕನಸು ಕಾಣಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡಾಶಕ್ತಿ ಮಹತ್ವದ ಸ್ಥಾನ ಪಡೆದಿದೆ. ಕ್ರೀಡಾಳುಗಳಿಗೆ ಉಜ್ವಲ ಭವಿಷ್ಯ ಲಭಿಸಲೆಂದು ಆಶಿಸಿದರು.ಪ್ರಾಚಾರ್ಯರು, ತಾಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ ಉಪಸ್ಥಿತರಿದ್ದರು. ಪ್ರಭು ಅಗಡಿ ನಿರ್ವಹಿಸಿದರು. ಪ್ರಾಚಾರ್ಯ ಡಾ. ದತ್ತಾತ್ರೇಯ ಗಾಂವ್ಕರ್ ಸ್ವಾಗತಿಸಿದರು. ದಿಗಂತ ಮತ್ತು ಪ್ರಭಾತ ಪ್ರಾರ್ಥಿಸಿದರು. ಯಲ್ಲಾಪುರ ತಾಲೂಕಿನ ಒಟ್ಟು 6 ಪಿಯು ಕಾಲೇಜುಗಳ ೫೦೦ ವಿದ್ಯಾರ್ಥಿಗಳು ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು
ವಿಶ್ವದರ್ಶನ ಪಪೂ ಕಾಲೇಜು ವಿದ್ಯಾರ್ಥಿಗಳ ಬಾಲಕರ ವಿಭಾಗದ ಗುಂಪು ಆಟದಲ್ಲಿ ಥ್ರೋಬಾಲ್ ಹಾಗೂ ಬಿಬಿಟಿಯಲ್ಲಿ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಮತ್ತು ವೈಯಕ್ತಿಕ ವಿಭಾಗದ ಚಕ್ರ ಎಸೆತದಲ್ಲಿ ರಾಜೀವ್ ಗೌಕರ್, ಹ್ಯಾಮರ್ ಎಸೆತದಲ್ಲಿ ರೌನಕ್ ಗೋಸಾವಿ ವಿಜೇತರಾದರು. ಹ್ಯಾಮರ್ ಮತ್ತು ಗುಂಡು ಎಸೆತದಲ್ಲಿ ಸೋನಿಯಾ ಅಣ್ವೀಕರ್ ಗೆಲುವು ಸಾಧಿಸಿದರು. ಪ್ರಥಮ ಪೂಜಾರಿ, ಆಯಾನ್ ಆಲನ, ಕ್ಷಮಿತ್ ಶೆಟ್ಟಿ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.