ಸಾರಾಂಶ
ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ ಸಮಾರಂಭ
ಕನ್ನಡಪ್ರಭ ವಾರ್ತೆ ಮಡಿಕೇರಿಪ್ರತಿಯೊಬ್ಬರು ಮಾತೃಭಾಷೆಗೆ ಪ್ರಾಮುಖ್ಯತೆ ನೀಡಿ ಮನೆಯಲ್ಲಿ ಅವರವರ ಮಾತೃ ಭಾಷೆಯಲ್ಲಿಯೇ ಮಾತನಾಡಬೇಕು. ಆಗ ಮಾತ್ರ ಆ ಮಣ್ಣಿನ ಸಂಸ್ಕಾರ-ಸಂಸ್ಕೃತಿ ಪರಂಪರೆಗಳು ಮಕ್ಕಳಿಗೆ ತಿಳಿಯುತ್ತಾ ಹೋಗುತ್ತದೆ ಎಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ಹೇಳಿದರು.
ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಂಗ್ಲಭಾಷೆ ಕಲಿಯಬೇಕು. ಅದನ್ನು ಶಾಲೆಗಳಲ್ಲಿ ಕಲಿಯಲು ಅವಕಾಶವಿದೆ. ಮನೆಯಲ್ಲಿ ಮಾತೃಭಾಷೆಗೆ ಪ್ರಾಧಾನ್ಯತೆ ನೀಡಬೇಕು. ಅಂದು ಇಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭವಾಗಲು ಹಲವಾರು ಒತ್ತಡ, ಹೋರಾಟಗಳ ನಡವೆ ಪ್ರಾರಂಭಗೊಂಡಿರುವುದನ್ನು ನೆನಪಿಸಿಕೊಂಡ ಅವರು ಈಗ ಈ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ೨೫ ವರ್ಷಗಳನ್ನು ಪೂರೈಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದೆ ಇಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪ್ರಾರಂಭಿಸುವ ಆಲೋಚನೆ ಇದ್ದಲ್ಲಿ, ಅದಕ್ಕೆ ಬೇಕಾದ ಆಡಳಿತಾತ್ಮಕ ಸಹಕಾರ ಮಾಡುವುದಾಗಿ ಹೇಳಿದರು.ವಿವೇಕಾನಂದರ ಸಮಾರಂಭಗಳನ್ನು ಶಾಲೆಗಳಲ್ಲಿಯೇ ಆಚರಿಸುವಂತಾಗಬೇಕು. ಆಗ ಮಾತ್ರ ವಿವೇಕಾನಂದರ ಆದರ್ಶ, ಧೃಡ ನಿಲುವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ. ಯಾವುದೇ ಶಾಲೆಯು ಕೇವಲ ಪಾಠಕ್ಕೆ ಪ್ರಾಧಾನ್ಯತೆ ನೀಡಿದರೆ ಸಾಲದು. ಅಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಹೆಚ್ಚಿನ ಗಮನ ನೀಡಲು ಶಿಕ್ಷಕರು ಆಸಕ್ತಿ ತೋರಬೇಕು. ಎಲ್ಲ ಶಾಲೆಯಲ್ಲಿ ಒಂದು ಸುಸಜ್ಜಿತ ಆಟದ ಮೈದಾನ ಇರಲೇಬೇಕು. ಮಕ್ಕಳಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಯವಂತಹ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿ, ಖ್ಯಾತ ಸೈಕೊಥೆರಫಿಸ್ಟ್ ಅಬ್ರಾಹಂ ಪಿ. ರೂಬಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವುದರ ಮೂಲಕ ಓದಿದ ಶಾಲೆಗೂ, ಪೋಷಕರಿಗೂ ಕೀರ್ತಿ ತಂದುಕೊಡುವoತಾಗಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ಕೃತಜ್ಞತಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಮಕ್ಕಳು ದೇವರು, ಪೋಷಕರು, ಶಿಕ್ಷಕರಿಗೆ ಮೊದಲು ಕೃತಜ್ಞತೆಯನ್ನು ತೋರಬೇಕು. ಒಂದು ಎರಡು ಮಕ್ಕಳನ್ನು ಪೋಷಕರಿಗೆ ಮನೆಯಲ್ಲಿ ನೋಡಿಕೊಳ್ಳಲು ಈಗಿನ ಕಾಲದಲ್ಲಿ ಕಷ್ಟಕರವಾಗಿರುವಾಗ, ಶಾಲೆಯಲ್ಲಿ ಒಂದು ತರಗತಿಯಲ್ಲಿ ಸುಮಾರು ೩೦ರಿಂದ ೪೦ ವಿದ್ಯಾರ್ಥಿಗಳನ್ನು ಎಂಟು ಗಂಟೆಗಳ ಕಾಲ ನೋಡಿಕೊಳ್ಳುವುದು ಸಾಹಸದ ಕೆಲಸವಾಗಿದೆ. ಇಲ್ಲಿ ಪೋಷಕರು ಶಿಕ್ಷಕರೊಂದಿಗೆ ಅನ್ಯೋನ್ಯತೆಯಿಂದ ಇದ್ದು ಮಕ್ಕಳ ಉತ್ತಮ ಸ್ವಭಾವ ಬೆಳವಣಿಗೆಗೆ ಸಹಕಾರ ನೀಡುವಂತಾಗಬೇಕು ಎಂದರು.
* ಸ್ಮರಣ ಸಂಚಿಕೆ ಬಿಡುಗಡೆಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ಹೊರತರಲಾದ ‘ಜ್ವಲಿತಮ್’ ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ಎಂ.ಸಿ. ನಾಣಯ್ಯ ಬಿಡುಗಡೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಕರಕುಶಲ ವಸ್ತು ಪ್ರದರ್ಶನ ಮತ್ತು ಛಾಯಾಚಿತ್ರ ಪ್ರದರ್ಶನಗಳನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಮತ್ತು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು.
ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಡುವಂಡ ಬೆಲ್ಲು ಚಿಣ್ಣಪ್ಪ, ಕಾರ್ಯದರ್ಶಿ ಬಡುವಂಡ ಬೋಪಣ್ಣ, ಖಜಾಂಚಿ ಎನ್.ಒ. ಮ್ಯಾಥ್ಯು, ನಿರ್ದೇಶಕರಾದ ಮಾಳೇಟಿರ ನವೀನ್ ಕಾರ್ಯಪ್ಪ, ಡಾ. ಜೆ.ಎ. ಕುಂಞ್ ಅಬ್ದುಲ್ಲಾ, ಬಡುವಂಡ ವಿಜಯ, ಅವರೆಮಾದಂಡ ಸುಗುಣ ಸುಬ್ಬಯ್ಯ ಮತ್ತು ನಿವೃತ್ತ ಮುಖ್ಯಶಿಕ್ಷಕಿ ಶೀಲಾ ಅಬ್ದುಲ್ಲಾ, ಶಾಲಾ ಮುಖ್ಯೋಪಾಧ್ಯಾಯಿನಿ ಶಿಲ್ಪ ಪೊನ್ನಮ್ಮ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ತಾಯಿಬ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿ ಸುದೀಕ್ಷಾ ಪ್ರಾರ್ಥಿಸಿದರು. ಎ.ಬಿ. ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶಿಲ್ಪಾ ಪೊನ್ನಮ್ಮ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿನಿ ಜೀವಿತಾ ವಂದಿಸಿದರು.ಸಮಾರಂಭದ ನಂತರ ಜರುಗಿದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಆಕರ್ಷಣೀಯವಾಗಿದ್ದವು.