ಕ್ರಿಕೆಟ್‌ನಂತೆ ಉಳಿದ ಕ್ರೀಡೆಗಳಿಗೂ ಮಹತ್ವ ನೀಡಿ: ದಿನಕರ ಶೆಟ್ಟಿ

| Published : Sep 02 2024, 02:11 AM IST

ಸಾರಾಂಶ

ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಂಡು, ಮುಂದೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು.

ಗೋಕರ್ಣ: ಕ್ರಿಕೆಟ್‌ಗೆ ಕೊಡುವ ಮಹತ್ವವನ್ನು ಉಳಿದ ಕ್ರೀಡೆಗಳಿಗೂ ನೀಡಬೇಕು ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಜಿಪಂ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಗಂಗೆಕೊಳ್ಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆಶ್ರಯದಲ್ಲಿ ಇಲ್ಲಿನ ನಾಡುಮಾಸ್ಕೇರಿ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆದ ಗೋಕರ್ಣ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಂಡು, ಮುಂದೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು. ಶಿಕ್ಷಣದ ಜತೆಗೆ ಕ್ರೀಡೆಗೂ ಮಹತ್ವ ನೀಡಬೇಕು ಎಂದ ಅವರು, ಅಂದು ನಮ್ಮ ಸರ್ಕಾರ ಗಂಗೇಕೊಳ್ಳದಲ್ಲಿ ₹೩೨ ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಿಸಿ, ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು.

ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ, ಗ್ರಾಪಂ ಸದಸ್ಯರಾದ ಚಂದ್ರಶೇಖರ್ ನಾಯ್ಕ, ರಾಜೇಶ್ ನಾಯಕ್, ನಾಗರಾಜ್ ತಾಂಡೇಲ, ದಯಾನಂದ ಮೆಹ್ತಾ, ರೋಹಿಣಿ ವಸಂತ ನಾಯ್ಕ, ಗ್ರಾಪಂ ಮಾಜಿ ಸದಸ್ಯ ಶ್ರೀನಿವಾಸ ನಾಯಕ, ಪ್ರಭಾರ ದೈಹಿಕ ಪರಿವೀಕ್ಷಕ ಬಿ.ಜಿ. ನಾಯಕ ಉಪಸ್ಥಿತರಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಎನ್.ಆರ್. ನಾಯಕ ಸ್ವಾಗತಿಸಿದರು. ಅರುಣಾ ಶಿವಾನಂದ ನಾಯಕ ವಂದಿಸಿದರು. ರಶ್ಮಿ ಆರ್. ಮಹಾಲೆ, ವೆಂಕಟೇಶ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.